ಗ್ರಾಮವಾಸ್ತವ್ಯ ಪೋಟೋ ತೆರವಿಗೆ ವಿರೋಧ

mkg1d
Published on

ನ್ಯಾಮತಿ: ಕೋವಿಡ್ ನಂತರ ರಾಜ್ಯದಲ್ಲೇ ಮೊದಲ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿದ್ದ ನೆನಪಿಗೆ ಸುರಹೊನ್ನೆ ಗ್ರಾಮ ಪಂಚಾಯಿತಿಯಲ್ಲಿ ಹಾಕಿದ್ದ ಫೋಟೋ ತೆರವು ವಿರೋಧಿಸಿ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಗುರುವಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಸುರಹೊನ್ನೆ ಗ್ರಾಪಂ ಕಚೇರಿಯಲ್ಲಿ ಅಳವಡಿಸಿದ್ದ ಗ್ರಾಮ ವಾಸ್ತವ್ಯದ ಫೋಟೋವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಟಿ. ಕರಿಬಸಪ್ಪ ಯಾರಿಗೂ ಮಾಹಿತಿ ನೀಡದೆ ತೆರವುಗೊಳಿಸಿದ್ದಾರೆ ಎಂದು ಪ್ರತಿಭಟನಾನಿರತರು ದೂರಿದರು.

ಸ್ಥಳಕ್ಕೆ ಆಗಮಿಸಿದ ನ್ಯಾಮತಿ ಠಾಣಾಧಿಕಾರಿ ಬಿ.ಎಲ್. ಜಯಪ್ಪ ನಾಯ್ಕ ಎಲ್ಲರನ್ನು ಸಮಾಧಾನಗೊಳಿಸಿ, ಇಒ ಅವರನ್ನು ಕರೆಸಿದರು. ಈ ಕುರಿತು ಸ್ಪಷ್ಟನೆ ನೀಡಿದ ಇಒ ಕರಿಬಸಪ್ಪ, ಕೆಲ ನಿಯಮಾವಳಿ ಪ್ರಕಾರ ಕೆಲ ಭಾವಚಿತ್ರಗಳನ್ನು ಗ್ರಾಪಂನಲ್ಲಿ ಹಾಕಲು ಅವಕಾಶವಿಲ್ಲ. ಹಾಗಾಗಿ, ತೆಗೆಸಿದ್ದೆ. ಭಾವಚಿತ್ರವನ್ನು ತೆರವು ಮಾಡಿದ್ದ ಜಾಗಕ್ಕೆ ಮತ್ತೆ ಹಾಕಿಸುವೆ ಎಂದರು.

ಗ್ರಾಪಂ ಅಧ್ಯಕ್ಷೆ ಜಯಶೀಲಾ, ಕಾರ್ಯದರ್ಶಿ ಶಿವಾನಂದಪ್ಪ ಅವರು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಕರೆ ಮಾಡಿ ಈ ಕುರಿತು ಮಾಹಿತಿ ನೀಡಿದರು. ಸದ್ಯ ಎಲ್ಲರ ಒಪ್ಪಿಗೆ ಪಡೆದು ಭಾವಚಿತ್ರ ಹಾಕಿ. ಮುಂದಿನ ನಿರ್ಧಾರಗಳ ಬಗ್ಗೆ ಸದಸ್ಯರ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕ್ಕೆ ಬನ್ನಿ ಸೂಚಿಸಿದರು.
ಗ್ರಾಮದ ಹಿರಿಯರಾದ ಈಶ್ವರಪ್ಪ, ಕೆ. ಲೋಕೇಶ್ವರಪ್ಪ, ಆರ್.ಜಿ. ರೇವಣಪ್ಪ, ಗ್ರಾಪಂ ಮಾಜಿ ಸದಸ್ಯ ಸದಾಶಿವಪ್ಪ ಮತ್ತಿತರರಿದ್ದರು.
ಯಾವ ಪೋಟೋ?
ಕರೊನಾ ನಂತರ ರಾಜ್ಯದಲ್ಲೇ ಮೊದಲ ಬಾರಿಗೆ ಸುರಹೊನ್ನೆಯಲ್ಲಿ ಗ್ರಾಮ ವಾಸ್ತವ್ಯ ನಡೆದಿತ್ತು. ಅದರ ನೆನಪಿಗಾಗಿ ಉದ್ಘಾಟನೆಯ ಭಾವಚಿತ್ರವನ್ನು ಗ್ರಾಪಂ ಕಚೇರಿಯಲ್ಲಿ ಹಾಕಲಾಗಿತ್ತು. ಪೋಟೋದಲ್ಲಿ ಬಸವರಾಜ ಬೊಮ್ಮಾಯಿ, ಅಶೋಕ್, ಸಂಸದ ಜಿ.ಎಂ. ಸಿದ್ದೇಶ್ವರ, ಎಂ.ಪಿ. ರೇಣುಕಾಚಾರ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net