

ಮೈಸೂರು: ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಮಾಡಿರುವ ಕ್ರಮವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ಘಟಕದ ವತಿಯಿಂದ ಗಾಂಧಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಪಕ್ಷದ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜವನ್ನು ಕೆಳಗಿಳಿಸಲಾಗಿದೆ. ಇದು ಖಂಡನೀಯ. ಹನುಮ ಧ್ವಜ ಮತ್ತು ರಾಮ ವಿರೋಧಿಯಾದ ಕಾಂಗ್ರೆಸ್‌ಗೆ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.
ಕೆರಗೋಡು ಗ್ರಾಮದ ಮನೆ ಮನೆಗಳ ಮೇಲೆ ಹನುಮ ಧ್ವಜ ಹಾರಾಟಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ. ನಾವು ಸಹ ರಾಜ್ಯಾದ್ಯಂತ ಹನುಮ ಧ್ವಜ ಹಾರಿಸಲು ಕರೆ ಕೊಡುತ್ತೇವೆ. ನಿಮಗೆ ತಾಕತ್ತಿದ್ದರೆ ಅದನ್ನು ತಡೆಯಿರಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಶಾಸಕ ಎಸ್.ಟಿ.ಶ್ರೀವತ್ಸ ಮಾತನಾಡಿ, ಕೆರಗೋಡು ವಿಚಾರದಲ್ಲಿ ನಡೆಯುತ್ತಿರುವ ಹೋರಾಟ ರಾಜಕೀಯ ಲಾಭಕ್ಕಾಗಿ ಅಲ್ಲ. ನಾವು ಯಾವಾಗಲೂ ಈ ರೀತಿಯಾದ ಹೋರಾಟ ಮಾಡುತ್ತಾ ಬಂದಿದ್ದೇವೆ. ನಾವು ಬೆಳೆದು ಬಂದಿರುವುದೇ ಹೀಗೆ. ಇದರಲ್ಲಿ ರಾಜಕೀಯ ಲಾಭ ಪಡೆಯುವುದು ಏನಿಲ್ಲ. ಕೇಸರಿಯನ್ನು ನಮಗೆ ಬ್ರಾಂಡ್ ಮಾಡಲಾಗಿದೆ. ಹೀಗಾಗಿ ನಾವು ಒಪ್ಪಿಕೊಂಡಿದ್ದೇವೆ. ನಾವು ಯಾವತ್ತೂ ಹಸಿರು ಬಣ್ಣವನ್ನು ಒಪ್ಪಿಕೊಂಡಿಲ್ಲ. ರೈತರ ಹಸಿರನ್ನು ಮಾತ್ರ ನಾವು ಒಪ್ಪಿಕೊಂಡಿದ್ದು, ಇನ್ನೊಂದು ಧರ್ಮದ ಹಸಿರನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದರು.
ಪಕ್ಷದ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ರಘು, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಅನಿಲ್ ಥಾಮಸ್, ಮಾಜಿ ಮೇಯರ್ ಶಿವಕುಮಾರ್ ಇನ್ನಿತರರು ಪಾಲ್ಗೊಂಡಿದ್ದರು.