ಪಡಿತರ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

ration
ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮ ಎಸಗಲಾಗುತ್ತಿದೆ ಎಂದು ಆರೋಪಿಸಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆಯ ವಾಟಾಳ್ ಮಂಜುನಾಥ್, ಲೋಕೇಶ್, ನಿತಿನ್ ರೆಡ್ಡಿ, ಸತೀಶ್ ಗೌಡ, ರವಿ, ರಾಘವೇಂದ್ರ, ಮಾರುತಿ, ಭಾಷಾ, ಪ್ರಾಕ್ಲಿನ್ ಸಾಲೋಮನ್ ಮುಂತಾದವರು ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ:ಜಿಲ್ಲೆಯ ಹಲವು ನ್ಯಾಯಬೆಲೆ ಅಂಗಡಿಗಳಲ್ಲಿ ಸಕಾಲದಲ್ಲಿ ಪಡಿತರ ವಿತರಣೆ ಮಾಡುತ್ತಿಲ್ಲ. ಬಯೋಮೆಟ್ರಿಕ್‌ಗಾಗಿ ಪಡಿತರದಾರರಿಂದ ಹಣ ಪಡೆಯಲಾಗುತ್ತಿದೆ. ಇಂತಹ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಪ್ರಮುಖರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಮೊದಲು ಬಯೋಮೆಟ್ರಿಕ್ ಪಡೆಯುತ್ತಾರೆ. ಬಳಿಕ ತಾವು ಸೂಚಿಸಿದ ದಿನದಂದು ಬಂದು ಪಡಿತರ ಪಡೆದುಕೊಳ್ಳುವಂತೆ ಪಡಿತರದಾರರಿಗೆ ತಿಳಿಸುತ್ತಾರೆ. ಉಚಿತವಾಗಿ ಬಯೋಮೆಟ್ರಿಕ್ ಪಡೆಯಬೇಕೆಂಬ ನಿಯಮವಿದ್ದರೂ ಅದಕ್ಕಾಗಿ 10 ರೂ. ಶುಲ್ಕ ಪಡೆಯುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ನ್ಯಾಯಬೆಲೆ ಅಂಗಡಿ ಎದುರು ಸರಿಯಾದ ಮಾಹಿತಿಯುಳ್ಳ ಫಲಕ ಅಳವಡಿಸಿಲ್ಲ. ಸರ್ಕಾರ ನೀಡುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ನಿಗದಿಪಡಿಸಿದ ದಿನಾಂಕದಲ್ಲಿ ಪಡಿತರ ವಿತರಣೆ ಮಾಡುತ್ತಿಲ್ಲ. ಇದರಿಂದ ಪಡಿತರದಾರರಿಗೆ ಸಮಸ್ಯೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಜರುಗಿಸುತ್ತಿಲ್ಲ. ಈ ಅಕ್ರಮಗಳನ್ನು ತಡೆಗಟ್ಟದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ್, ಕಾರ್ಯದರ್ಶಿ ನಿತಿನ್ ರೆಡ್ಡಿ, ನಗರಾಧ್ಯಕ್ಷ ಲೋಕೇಶ್, ಪ್ರಮುಖರಾದ ರವಿ, ಬಾಷಾ, ಮಾರುತಿ , ಸತೀಶ್ ಗೌಡ, ರಾಘವೇಂದ್ರ, ಪ್ರಾಕ್ಲಿನ್ ಸಾಲೋಮನ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net