

ಮಂಡ್ಯ: ಮಹಿಳೆ ಮೇಲೆ ದೌರ್ಜನ್ಯ ನಡೆಸಿದ ಎಸ್‌ಐ ಅಯ್ಯನಗೌಡ ಸೇರಿದಂತೆ ಠಾಣೆಯ ಪೊಲೀಸರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಬುಧವಾರ ಪ್ರಗತಿಪರ ಹಾಗೂ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಪೂರ್ವ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಮಹಿಳೆ ಮೇಲೆ ದೌರ್ಜನ್ಯ ನಡೆಸಿರುವ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಹಸು ಕಟ್ಟಿ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ರೂಪಾದೇವಿ ವಿರುದ್ಧ ಯಾವುದೇ ದೂರು ಇಲ್ಲದಿದ್ದರೂ, ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಲವಂತವಾಗಿ ಜಿಪ್‌ಗೆ ಹತ್ತಿಸಿಕೊಂಡು ಠಾಣೆಗೆ ಕರೆತರಲಾಗಿದೆ. ಮಾತ್ರವಲ್ಲದೆ ಕೋಣೆಯೊಂದರಲ್ಲಿ ಕೂಡಿ ಹಾಕಿ ಅಯ್ಯನಗೌಡ ಮತ್ತು ಹಲವು ಸಿಬ್ಬಂದಿ ಮನಬಂದಂತೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಮಹಿಳೆ ಮೇಲೆ ಪೊಲೀಸರು ಗೂಂಡಾ ವರ್ತನೆ ತೋರಿರುವುದು ಸಂವಿಧಾನ ವಿರೋಧಿಯಾಗಿದೆ. ಮಾನವ ಹಾಗೂ ಮಹಿಳೆಯರ ಹಕ್ಕುಗಳನ್ನು ಧಮನ ಮಾಡುವ ವರ್ತನೆ ಕಾನೂನು ಬಾಹಿರವಾಗಿದೆ. ರಕ್ಷಣೆ ನೀಡಬೇಕಾದ ಪೊಲೀಸರೇ ಭಕ್ಷಕರಾಗಿದ್ದಾರೆ. ಗೂಂಡಾ ವರ್ತನೆ ಅಕ್ಷಮ್ಯ ಅಪರಾಧ. ಇದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತಲೆತಗ್ಗಿಸುವ ವಿಚಾರ. ಹೆಣ್ಣು ಭ್ರೂಣ ಹತ್ಯೆ, ಸಾಮೂಹಿಕ ಅತ್ಯಾಚಾರ, ಬಾಲ್ಯ ವಿವಾಹ, ಮಹಿಳಾ ವಿರೋಧಿ ವಿಚಾರದಲ್ಲಿ ಸುದ್ದಿ ಆಗುತ್ತಿರುವುದು ನಾಚಿಕೆಗೇಡಿನ ಸಂಗತಿ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಅಮಾಯಕ ಮಹಿಳೆಯ ಮೇಲೆ ನಡೆದಿರುವ ಪೊಲೀಸರ ದೌರ್ಜನ್ಯ ಸಾಕ್ಷಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅಯ್ಯನಗೌಡ ವಿರುದ್ಧ ಹಲವು ಗಂಭೀರ ಆರೋಪ ಇರುವುದರಿಂದ, ಬೇರೆಡೆ ವರ್ಗಾವಣೆ ಮಾಡಿದರೂ ಅಮಾಯಕರ ಮೇಲೆ ದೌರ್ಜನ್ಯ ಮುಂದುವರೆಸುತ್ತಾರೆ. ಆದ್ದರಿಂದ ಪಿಎಸ್‌ಐನನ್ನು ಸೇವೆಯಿಂದ ವಜಾ ಮಾಡಬೇಕು. ಜಿಲ್ಲೆಯ ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಮಹಿಳೆಯರ ವಿಚಾರದಲ್ಲಿ ಸಂವೇದನಶೀಲಾರಾಗಿ ಕೆಲಸ ನಿರ್ವಹಿಸಬೇಕು. ನೊಂದ ಮಹಿಳೆಗೆ ಸೂಕ್ತ ರಕ್ಷಣೆ ಹಾಗೂ ಪರಿಹಾರ ಒದಗಿಸಬೇಕು. ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳು ಮರುಕಳಿಸದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿಯ ಜಿ.ಪೂರ್ಣಿಮಾ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಸಿಪಿಐಎಂನ ಟಿ.ಎಲ್ ಕೃಷ್ಣೇಗೌಡ, ರೈತ ಸಂಘದ ಲತಾ ಶಂಕರ್, ರಾಷ್ಟ್ರೀಯ ಭಾರತೀಯ ಮಾನವ ಹಕ್ಕು ಸಂಘದ ಬಿ.ಪಿ.ರಾಧಾಮಣಿ, ಎ.ಬಿ.ಶಶಿಕಲಾ, ವಿಮೋಚನ ಮಹಿಳಾ ಸಂಘಟನೆಯ ಸಂಚಾಲಕ ಜನಾರ್ದನ, ಎಂ.ಸಿದ್ದರಾಜು ಇದ್ದರು.