ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಒಕ್ಕಲಿಗರ ಆಕ್ರೋಶ: ಜಿಲ್ಲಾದ್ಯಂತ ಸಂಘಟನೆಗಳ ಪ್ರತಿಭಟನೆ

Protest against Prof. K. S. Bhagavan mandya
Published on

ಮಂಡ್ಯ: ಒಕ್ಕಲಿಗ ಸಮುದಾಯದ ವಿರುದ್ಧ ಪ್ರೊ.ಕೆ.ಎಸ್.ಭಗವಾನ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಸೋಮವಾರ ಮಂಡ್ಯ, ಮದ್ದೂರು, ಮಳವಳ್ಳಿಯಲ್ಲಿ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ನಗರದ ರೈತ ಸಭಾಂಗಣದ ಆವರಣದಲ್ಲಿರುವ ರಾಷ್ಟ್ರಕವಿ ಕುವೆಂಪು ಪುತ್ಥಳಿ ಎದುರು ಅಖಂಡ ಕರ್ನಾಟಕ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಸಮುದಾಯದವರು ಪ್ರತಿಭಟನೆ ನಡೆಸಿಭಗವಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕಲಿಗರು ನೆಲದ ಸಂಸ್ಕೃತಿಯ ಪ್ರತೀಕ. ಭೂಮಿ ನಂಬಿ ಬದುಕು ಮಾಡುತ್ತಿದ್ದು, ಸುಸಂಸ್ಕೃತ ಬದುಕು ನಡೆಸುತ್ತಿದ್ದಾರೆ. ಆದರೆ ಒಕ್ಕಲಿಗ ಸಮುದಾಯವನ್ನು ಅವಹೇಳನ ಮಾಡುವ ಮೂಲಕ ಜಾತಿ ಜಾತಿಗಳ ನಡುವೆ ಸಂಘರ್ಷ ವನ್ನುಂಟು ಮಾಡುವ ಹುನ್ನಾರ ನಡೆಸಲಾಗುತ್ತಿದೆ. ಅವಹೇಳನ ಮಾತನಾಡಿ, ಇದೀಗ ನಾನು ಹೇಳುತ್ತಿಲ್ಲ, ಬೇರೆಯವರು ಹೇಳಿದ್ದಾರೆಂದು ಹೇಳುವ ಮೂಲಕ ಸಮಾಜದಲ್ಲಿ ಸೌಹಾರ್ದತೆ ಕದಡಲು ಮುಂದಾಗಿದ್ದಾರೆ. ಇಂತವರು ಸಮಾಜ ಹಾಗೂ ಮಾನವ ವಿರೋಧಿಯಾಗಿದ್ದಾರೆಂದು ಕಿಡಿಕಾರಿದರು.

ಸಮುದಾಯದ ವಿರುದ್ಧ ಆಡಿರುವ ಅವಹೇಳನ ಮಾತನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಸಮುದಾಯದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಜತೆಗೆ ಕೂಡಲೇ ಒಕ್ಕಲಿಗ ಸಮುದಾಯದ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯದಿಂದ ಗಡಿಪಾರು ಮಾಡಬೇಕು. ಅಥವಾ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಒಕ್ಕಲಿಗರ ಸಂಘದ ರಾಜ್ಯ ಉಪಾಧ್ಯಕ್ಷ ಕೃಷ್ಣ, ಜಿಲ್ಲಾಧ್ಯಕ್ಷ ಕೆ.ಸಿ.ರವೀಂದ್ರ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಕೃಷ್ಣ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net