ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

20adarshkdga4
Published on

ಮಡಿಕೇರಿ: ಬೆಲೆ ಏರಿಕೆ ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಕೊಡಗು ಘಟಕದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.


ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದರು.


ಈ ಸಂದರ್ಭ ಪಕ್ಷದ ಕಾರ್ಯದರ್ಶಿ ಎಚ್.ಬಿ.ರಮೇಶ್ ಮಾತನಾಡಿ, ಅಗತ್ಯ ವಸ್ತುಗಳಾದ ಅಡುಗೆ ಎಣ್ಣೆ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಔಷಧಿಗಳ ಬೆಲೆ ಏರಿಕೆ ನಿಯಂತ್ರಿಸದೇ ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಮತ್ತಷ್ಟು ಸಂಕಟಗಳ ಸರಮಾಲೆ ಸೃಷ್ಟಿಸುತ್ತಿದೆ. ಚುನಾವಣೆಯ ಆರಂಭದಲ್ಲಿ ಬೆಲೆ ತಗ್ಗಿಸುತ್ತೇವೆ ಎಂದು ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಇಂದು ದಿನದಿಂದ ದಿನಕ್ಕೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ಇದರಿಂದ ಬಡವರು ನೆಮ್ಮದಿಯ ಬದುಕು ಸಂಕಷ್ಟಕ್ಕೀಡಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎ.ಸಿ.ಸಾಬು, ಶಿವಪ್ಪ, ಪಿ.ಆರ್.ಭರತ್, ಎನ್.ಡಿ.ಕುಟ್ಟಪ್ಪ, ಶೋಭಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net