ದರ ತಾರತಮ್ಯ ಖಂಡಿಸಿ ಪ್ರತಿಭಟನೆ ನ. 4ರಂದು

27-BNK-1
Published on

ಬಂಕಾಪುರ: ಶಿಗ್ಗಾಂವಿ ತಾಲೂಕಿನ ಕೋಣನಕೇರಿ ಹತ್ತಿರದ ವಿಐಎನ್​ಪಿ ಸಕ್ಕರೆ ಕಾರ್ಖಾನೆ ಕಬ್ಬಿನ ದರದಲ್ಲಿ ಮಾಡುತ್ತಿರುವ ತಾರತಮ್ಯ ಮತ್ತು ಹಿಂದಿನ ವರ್ಷದ ಬಾಡಿಗೆಯಲ್ಲಿನ ಉಳಿತಾಯದ ಹಣ ಪಾವತಿಸುವಂತೆ ಆಗ್ರಹಿಸಿ ಶಿಗ್ಗಾಂವಿ ತಾಲೂಕಿನ ಎಲ್ಲ ಕಬ್ಬು ಬೆಳೆಗಾರರು ನ. 4 ರಂದು ಸಕ್ಕರೆ ಕಾರ್ಖಾನೆ ಮತ್ತು ಕಾರ್ಖಾನೆಗೆ ಬರುವ ಎಲ್ಲ ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ತೀರ್ವನಿಸಲಾಗಿದೆ ಎಂದು ಕಬ್ಬು ಬೆಳೆಗಾರ ಮುತ್ತನಗೌಡ್ರ ಪಾಟೀಲ ಹೇಳಿದರು.

ಶಿಗ್ಗಾಂವಿ ತಾಲೂಕಿನ ಹೊಸೂರ ಗ್ರಾಮದ ಬಸವೇಶ್ವರ ಸಭಾಭವನದಲ್ಲಿ ಸೋಮವಾರ ಕರೆದಿದ್ದ ಕಬ್ಬು ಬೆಳೆಗಾರರ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಮೂರು ವರ್ಷಗಳಿಂದ ಕೋಣನಕೇರಿ ಹತ್ತಿರದ ವಿಐಎನ್​ಪಿ ಸಕ್ಕರೆ ಕಾರ್ಖಾನೆ ಕಬ್ಬು ಖರೀದಿಯಲ್ಲಿ ತಾರತಮ್ಯ ಮಾಡುತ್ತಿದೆ. ಪಕ್ಕದ ತಾಲೂಕುಗಳಾದ ಕಲಘಟಗಿ, ಮುಂಡಗೋಡ, ಹುಬ್ಬಳ್ಳಿ, ಹಳಿಯಾಳ ತಾಲೂಕಿನ ರೈತರಿಗೆ ಕಟಾವು ಮತ್ತು ಬಾಡಿಗೆ ಹೊರತುಪಡಿಸಿ ಟನ್​ಗೆ ನೇರವಾಗಿ 3,125 ರೂ. ಗಳನ್ನು ನೀಡುತ್ತಿದ್ದಾರೆ. ಶಿಗ್ಗಾಂವಿ ತಾಲೂಕಿನ ಕಬ್ಬು ಬೆಳೆಗಾರರಿಗೆ ಬಾಡಿಗೆ ಮತ್ತು ಕಟಾವು ಮುರಿದು ಟನ್​ಗೆ 2,575 ರೂ. ನೀಡುವ ಮೂಲಕ ಶಿಗ್ಗಾಂವಿ ತಾಲೂಕಿನ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ.

ಪಕ್ಕದ ತಾಲೂಕಿನ ಕಬ್ಬಿಗೆ ನೀಡುವ ದರವನ್ನು ನಮ್ಮ ತಾಲೂಕಿನ ಕಬ್ಬಿಗೂ ನೀಡಬೇಕು. ಕಳೆದ ಮೂರು ವರ್ಷಗಳಿಂದ ಬಾಡಿಗೆ ಉಳಿತಾಯದ ಹಣ ಇದುವರೆಗೆ ನೀಡಿಲ್ಲ. ಅದನ್ನು ಪಾವತಿಸುವಂತೆ ಹಲವು ಬಾರಿ ಕಾರ್ಖಾನೆಗೆ ಮನವಿ ಮಾಡಿದರೂ ಪಾವತಿಸಿಲ್ಲ. ಈ ಎಲ್ಲ ತಾರತಮ್ಯವನ್ನು ಖಂಡಿಸಿ ನ. 4ರಂದು ಕಾರ್ಖಾನೆಗೆ ಬರುವ ಎಲ್ಲ ರಸ್ತೆಗಳನ್ನು ಮತ್ತು ಕಾರ್ಖಾನೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಸಭೆಯಲ್ಲಿ ತೀರ್ವನಿಸಲಾಯಿತು.

ಕಬ್ಬು ಬೆಳೆಗಾರರಾದ ರಾಜಣ್ಣ ಪಾಸಾರ, ಸುಭಾಸ ಹೋತನಹಳ್ಳಿ, ನಿಂಗನಗೌಡ್ರ ಪಾಟೀಲ, ನಾಗರಾಜ ಸೂರಗೊಂಡ, ಚನ್ನಪ್ಪ ಬಿಂದ್ಲಿ, ಹನುಮರೆಡ್ಡಿ ನಡುವಿನಮನಿ, ಶಂಭಣ್ಣ ದೊಡಮನಿ, ಸುರೇಶಗೌಡ್ರ ಪಾಟೀಲ, ವೀರಭದ್ರಪ್ಪ ವಾಲಿಶೆಟ್ಟರ, ವಿರೂಪಾಕ್ಷಪ್ಪ ಕ್ಯಾಬಳ್ಳಿ, ಮುತ್ತಪ್ಪ ವೀರಾಪುರ, ಗದಿಗೆಯ್ಯ ಹಿರೇಮಠ, ಸುಧೀರ ಛಬ್ಬಿ, ಷಣ್ಮುಖಪ್ಪ ಮೆಣಸಿನಕಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net