ಪ್ರಜ್ವಲ್ ರೇವಣ್ಣ, ಎಚ್.ಡಿ.ರೇವಣ್ಣ ವಿರುದ್ಧ ಪ್ರತಿಭಟನೆ

mysore
Published on

ಮೈಸೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್.ಡಿ.ರೇವಣ್ಣ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸಂತ್ರಸ್ತ ಮಹಿಳೆಯರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.


ನಗರದ ಚಿಕ್ಕಗಡಿಯಾರದ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ಆರೋಪಿಗಳ ವಿರುದ್ಧ ಘೋಷಣೆ ಕೂಗಿದರು.


ಹಾಸನದಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಗಳ ಚಿತ್ರ, ದೃಶ್ಯವನ್ನು ಪೆನ್‌ಡ್ರೈವ್ ಮೂಲಕ ಹಂಚಲಾಗಿದೆ. ಇವುಗಳೆಲ್ಲ ಸಾಮಾಜಿಕ ಜಾಲ ತಾಣದಲ್ಲೂ ಹರಿದಾಡುತ್ತಿವೆ. ಎಲ್ಲೆಡೆ ಈ ಕೃತ್ಯದ ಕುರಿತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಚಿತ್ರದಲ್ಲಿರುವ ಮಹಿಳೆಯರ ಖಾಸಗಿ, ಕೌಟುಂಬಿಕ ಬದುಕು ಛಿದ್ರವಾಗಿದೆ. ಕೆಲವರು ಆತ್ಮಹತ್ಯೆಗೆ ಪ್ರಯತ್ನಿಸಿರುವ ಕುರಿತು ಸಹ ವರದಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಘಟನೆ ಬೆಳಕಿಗೆ ಬಂದ ತಕ್ಷಣವೇ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದ್ದರೆ ಲೈಂಗಿಕ ಹಗರಣದ ದೃಶ್ಯಗಳು ವ್ಯಾಪಕವಾಗಿ ಹಂಚಿಕೆಯಾಗದಂತೆ ತಡೆಯಬಹುದಿತ್ತು. ಸರ್ಕಾರಕ್ಕೆ ಮಹಿಳೆಯರ ಘನತೆಯ ಪ್ರಶ್ನೆಗಿಂತಲೂ ಚುನಾವಣಾ ರಾಜಕೀಯ ಪ್ರಮುಖವಾಗಬಾರದಿತ್ತು. ಇಡೀ ಪ್ರಕರಣದ ತನಿಖೆಗೆ ರಚನೆ ಮಾಡಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಯಾವುದೇ ಒತ್ತಡಗಳಿಗೆ ಮಣಿಯದೆ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ರಕ್ಷಣೆ, ನ್ಯಾಯ ಒದಗಿಸಬೇಕು. ಸಾಕ್ಷಿಗಳಿಗೂ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.


ಲೈಂಗಿಕ ಚಿತ್ರ, ದೃಶ್ಯವನ್ನು ಹಂಚಿಕೆ ಮಾಡಿದ ವ್ಯಕ್ತಿಗಳನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿ ಬಂಧಿಸಬೇಕು. ಅಕ್ರಮ ನಡೆದಿರುವುದು ಗೊತ್ತಿದ್ದರೂ ಅದು ಬಹಿರಂಗವಾಗಿ ಹರಿದಾಡಲು ಸಮಯ ಕಾದ ಬಿಜೆಪಿ ಮುಖಂಡ ಡಿ.ದೇವರಾಜೇಗೌಡ ಅವರನ್ನು ಸಹ ವಿಚಾರಣೆಗೆ ಒಳಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.


ಸಂತ್ರಸ್ತ ಮಹಿಳೆಯರ ವಿಷಯದಲ್ಲಿ ಗೌಪ್ಯತೆಯನ್ನು ಕಾಪಾಡಬೇಕು. ಅವರಿಗೆ ಸೂಕ್ತ ರಕ್ಷಣೆ ನೀಡಬೇಕು. ಅವರಿಗೆ ಪ್ರತ್ಯೇಕ ಕೌನ್ಸೆಲಿಂಗ್ ಕೇಂದ್ರ ತೆರೆಯಬೇಕು. ಪ್ರತ್ಯೇಕ ದೂರು ಕೇಂದ್ರ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.


ಮಾಜಿ ಮೇಯರ್ ನಾರಾಯಣ್, ಮುಖಂಡರಾದ ರತಿರಾವ್, ಉಮಾದೇವಿ, ಕೆ.ಆರ್.ಸುಮತಿ, ಸವಿತಾ ಪ.ಮಲ್ಲೇಶ್, ಕೆ.ಎಸ್.ಶಿವರಾಮ್, ಗೋಪಾಲ್, ಸ್ಟಾೃನ್ಲಿ, ಪ್ರೊ.ಕಾಳಚನ್ನೇಗೌಡ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net