ಫೋಟೋ ಶೂಟ್‌ಗೆ ಶುಲ್ಕ ನಿಗದಿ ಖಂಡಿಸಿ ಪ್ರತಿಭಟನೆ

amt 27-1
ಆಲಮಟ್ಟಿ ಉದ್ಯಾನದ ಹೊರಬಾಜು ಪ್ರಿವೆಡ್ಡಿಂಗ್ ಸೇರಿ ವಿವಿಧ ಫೋಟೋ ಶೂಟ್‌ಗೆ ಒಂದು ಸಾವಿರ ರೂ. ಶುಲ್ಕ ನಿಗದಿಪಡಿಸಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಮುಖ್ಯ ಇಂಜಿನಿಯರ್ ಕಚೇರಿ ಬಳಿ ಪ್ರತಿಭಟನೆ ನಡೆಸಿ ಉಪ ಇಂಜಿನಿಯರ್ ಐ.ಎಲ್ ಕಳಸಾ ಅವರಿಗೆ ಮನವಿ ಸಲ್ಲಿಸಿದರು. ವೇದಿಕೆ ಅಧ್ಯಕ್ಷ ಪತ್ತೇಸಾಬ್ ಚಾಂದ್, ಬಸವರಾಜ ಹೆರಕಲ್, ಮುನ್ನಾ ಶಿಂಧೆ, ಯಲಗೂರೇಶ ಮೇಟಿ ಇತರರಿದ್ದರು.
Published on

ಆಲಮಟ್ಟಿ: ಇಲ್ಲಿನ ಉದ್ಯಾನದ ಹೊರಬಾಜು ಪ್ರಿವೆಡ್ಡಿಂಗ್ ಸೇರಿ ವಿವಿಧ ಫೋಟೋ ಶೂಟ್‌ಗೆ ಒಂದು ಸಾವಿರ ರೂ. ಶುಲ್ಕ ನಿಗದಿಪಡಿಸಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಮುಖ್ಯ ಇಂಜಿನಿಯರ್ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಆಲಮಟ್ಟಿಯ ಡ್ಯಾಂ ಸರ್ಕಲ್ನಿಂದ ಆಲಮಟ್ಟಿಯ ಪೆಟ್ರೋಲ್ ಪಂಪ್‌ವರೆಗೆ ರಸ್ತೆಯುದ್ದಕ್ಕೂ ಹಚ್ಚಿರುವ ವಿವಿಧ ಗಿಡಗಳ ಸುಂದರ ಜಾಗವಿದೆ. ಅಂದಾಜು ಒಂದೂವರೆ ಕಿ.ಮೀವರೆಗೂ ಈ ನೋಟ ಅದ್ಭುತವಾಗಿದೆ. ಇಲ್ಲಿ ಫೋಟೋ ಶೂಟ್‌ಗೆ ಹೇಳಿ ಮಾಡಿಸಿದ ತಾಣವಾಗಿದೆ. ಅದಕ್ಕಾಗಿ ನಿತ್ಯ ಹಲವಾರು ಜೋಡಿಗಳ ಪ್ರಿವೆಡ್ಡಿಂಗ್ ಫೋಟೋ ಶೂಟ್ ನಡೆಯುತ್ತವೆ. ಉದ್ಯಾನದ ಹೊರಗಡೆ ಇದ್ದುದರಿಂದ ಇಲ್ಲಿಯವರೆಗೆ ಫೋಟೋ ಶೂಟ್‌ಗೆ ಶುಲ್ಕ ಇರಲಿಲ್ಲ. ಆದರೆ, ಕಳೆದ ಫೆ.15 ರಿಂದ ಪ್ರಿವೆಡ್ಡಿಂಗ್ ಶೂಟಿಂಗ್‌ಗೆ ಒಂದು ಜೋಡಿಗೆ ಒಂದು ಸಾವಿರ ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಉದ್ಯಾನದ ಹೊರಗಡೆಯ ಸೌಂದರ್ಯಕ್ಕೆ ಶುಲ್ಕ ಏಕೆ? ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.

ಆಲಮಟ್ಟಿಯ ಫೋಟೋ ಶೂಟ್‌ನಿಂದ ಉದ್ಯಾನಗಳ ಬಗ್ಗೆ ಪ್ರಚಾರವೂ ಆಗುತ್ತದೆ. ಹೀಗಾಗಿ ಫೋಟೋ ಶೂಟ್‌ಗೆ ಶುಲ್ಕ ನಿಗದಿಗೊಳಿಸಬಾರದು ಎಂದು ಅವರು ಆಗ್ರಹಿಸಿದರು.

ಬಳಿಕ ಉಪಮುಖ್ಯ ಇಂಜಿನಿಯರ್ ಐ.ಎಲ್. ಕಳಸಾ ಅವರಿಗೆ ಮನವಿ ಸಲ್ಲಿಸಿದರು.

ವೇದಿಕೆ ಅಧ್ಯಕ್ಷ ಪತ್ತೇಸಾಬ್ ಚಾಂದ್, ಬಸವರಾಜ ಹೆರಕಲ್, ಮುನ್ನಾ ಶಿಂಧೆ, ಯಲಗೂರೇಶ ಮೇಟಿ, ರಫೀಕ್ ಅಥಣಿ, ಶಿವು ಕೊಳ್ಳಾರ, ಚಂದ್ರ ಮಾದರ, ಶಿವಾನಂದ ಕೊಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net