

ಮೈಸೂರು: ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ನಗರದ ಆರ್‌ಟಿಒ ಕಚೇರಿ ಬಳಿ ಇರುವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಲೋಕಸಭಾ ಚುನಾವಣೆ ಬಳಿಕ ವಾಹನ ಸವಾರರಿಗೆ ದೊಡ್ಡ ಶಾಕ್ ನೀಡಿದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಗಾಯದ ಮೇಲೆ ಬೆಲೆ ಏರಿಕೆ ಬರೆ ಎಳೆದಂತಾಗಿದೆ ಎಂದು ಖಂಡಿಸಿದರು.
ಅಧಿಕಾರಕ್ಕೆ ಬರುವ ಮುಂಚೆ ಬಿಜೆಪಿ ಸರ್ಕಾರವನ್ನು ಜನ ವಿರೋಧಿ ಸರ್ಕಾರ, ಬೆಲೆ ಏರಿಕೆ ಮಾಡುತ್ತಿದೆ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದರೆ ಎಲ್ಲ ಬೆಲೆಗಳನ್ನು ಇಳಿಸುತ್ತೇವೆ ಹಾಗೂ ಉಚಿತ ಐದು ಭಾಗ್ಯಗಳನ್ನು ನೀಡುತ್ತೇವೆ ಎಂದು ಹೇಳಿತ್ತು ಎಂದರು.
ಆದರೆ ರಾಜ್ಯದ ಜನತೆಗೆ ಆಮಿಷ ಒಡ್ಡಿ, ಅಧಿಕಾರಕ್ಕೆ ಬಂದ ಬಳಿಕ ಉಚಿತ ಭಾಗ್ಯಗಳಿಗೋಸ್ಕರ ಮೊದಲು ವಿದ್ಯುತ್ ದರ ಹೆಚ್ಚಳ, ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹೆಚ್ಚಳ, ಆಹಾರ ಧಾನ್ಯಗಳ ಬೆಲೆ ಹೆಚ್ಚಳ, ಹಾಲಿನ ದರ ಹೆಚ್ಚಳ, ಮನೆಗಳ ರಿಜಿಸ್ಟ್ರೇಷನ್ ಸ್ಟಾೃಂಪ್ ಡ್ಯೂಟಿ ದರ ಹೆಚ್ಚಳ, ಮದ್ಯದ ಬೆಲೆ ಹೆಚ್ಚಳ ಮಾಡಿದ್ದಲ್ಲದೆ ಈಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಉಚಿತ ಭಾಗ್ಯದ ಹೆಸರಿನಲ್ಲಿ ಜನರಿಗೆ ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ. ಉಚಿತ ಭಾಗ್ಯಗಳಿಂದ ರಾಜ್ಯದ ಬೊಕ್ಕಸ ಬರಿದಾಗುತ್ತಿದೆ. ಅತಿ ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಬೇಕಾದ ರಾಜ್ಯ ಸರ್ಕಾರ ಪದೇ ಪದೆ ಬೆಲೆ ಏರಿಕೆ ಮಾಡಿ ರಾಜ್ಯದ ಜನತೆಗೆ ತೊಂದರೆ ನೀಡುತ್ತಿದೆ ಎಂದು ಟೀಕಿಸಿದರು.
ಮುಂಬರುವ ಬಿಬಿಎಂಪಿ, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ನಡೆಯುವುದರಿಂದ ಚುನಾವಣೆಗಾಗಿ ಬಿಟ್ಟಿ ಭಾಗ್ಯಗಳನ್ನು ಇನ್ನೂ ಜೀವಂತವಾಗಿಟ್ಟುಕೊಳ್ಳಲು ರಾಜ್ಯದ ಜನರಿಗೆ ಅತಿ ಅಗತ್ಯವಾಗಿರುವ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ರಾಜ್ಯ ಸರ್ಕಾರ ಈ ಕೂಡಲೇ ಬೆಲೆ ಏರಿಕೆ ನಿಯಂತ್ರಣ ಮಾಡಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜಸ್ ಲೋಕೇಶ್‌ಗೌಡ, ಮುಖಂಡರಾದ ಎಂ.ಬಿ.ಪ್ರಭುಶಂಕರ್, ಕೃಷ್ಣಯ್ಯ, ಸುರೇಶ್ ಗೋಲ್ಡ್, ಶಾಂತಾ ರಾಜೇಅರಸ್, ಶಿವಲಿಂಗಯ್ಯ, ನೇಹಾ, ನಾರಾಯಣ ಗೌಡ, ಲಕ್ಷ್ಮೀ, ಭಾಗ್ಯಮ್ಮ , ಸುನೀಲ್ ಅಗರ್ವಾಲ್, ಪರಿಸರ ಚಂದ್ರು, ದರ್ಶನ್‌ಗೌಡ, ಹನುಮಂತಯ್ಯ, ರಾಧಾಕೃಷ್ಣ, ರಘುರಾಜ್ ಅರಸು, ಆನಂದ್, ಸ್ವಾಮಿಗೌಡ, ಗಣೇಶ ಪ್ರಸಾದ್, ರಾಮಕೃಷ್ಣ ಗೌಡ, ರವೀಶ್, ಪ್ರಭಾಕರ, ಮಹಾದೇವಸ್ವಾಮಿ ಇತರರು ಇದ್ದರು.