ಪಿಡಿಒ ಕ್ರಮ ಆಕ್ಷೇಪಿಸಿ ಪ್ರತಿಭಟನೆ

Gkn strike
Published on

ಗೋಕರ್ಣ: ಕಟ್ಟಡವೊಂದಕ್ಕೆ ವಿದ್ಯುತ್ ಸಂಪರ್ಕಕ್ಕಾಗಿ ನೀಡಲಾಗಿದ್ದ ಅನಾಕ್ಷೇಪಣಾ ಪತ್ರವನ್ನು(ಎನ್‌ಒಸಿ) ತಡೆ ಹಿಡಿದು, ಹೊಸ ಅನಾಕ್ಷೇಪಣಾ ಪತ್ರ ನೀಡಲು ನಿರಾಕರಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕ್ರಮವನ್ನು ವಿರೋಧಿಸಿ ಸದಸ್ಯರೊಬ್ಬರು ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.\

ಗ್ರಾಪಂ ಸದಸ್ಯ ಮಂಜುನಾಥ ಜನ್ನು ಅವರ ಹೊಸ ಕಟ್ಟಡಕ್ಕೆ ವಿದ್ಯುತ್ ಸಂಪರ್ಕಕ್ಕಾಗಿ ನೀಡಲಾಗಿದ್ದ ಎನ್‌ಒಸಿ ತಡೆ ಹಿಡಿದಿರುವುದಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದ ಸರ್ವ ಸದಸ್ಯರ ಸಭೆ ಚರ್ಚೆ ನಡೆಸಿತ್ತು. ಪಂಚಾಯಿತಿ ವತಿಯಿಂದ ಗೊತ್ತುಪಡಿಸಲಾದ ಕಾನೂನು ಸಲಹೆಗಾರರು ಎನ್‌ಒಸಿ ಕೊಡಬಹುದಾಗಿ ನೀಡಿರುವ ವರದಿಯಂತೆ ಮತ್ತು ನಿರ್ಮಿತ ಕಟ್ಟಡ ಮತ್ತು ರಸ್ತೆ ನಡುವಿನ ದೂರವನ್ನು ಕೆಲವು ಸದಸ್ಯರು ಅಳೆದಾಗ ಅದು ಕಾನೂನಾತ್ಮಕವಾಗಿ ಸರಿಯಿರುವುದರಿಂದ ತಡೆ ಹಿಡಿಯಲಾದ ಅನಾಕ್ಷೇಪಣಾ ಪತ್ರವನ್ನು ತಕ್ಷಣ ನೀಡುವಂತೆ ಬಹುಮತದಿಂದ ಸದಸ್ಯರು ಒತ್ತಾಯಿಸಿದರು. ಆದರೆ, ಜಿಲ್ಲಾ ಪಂಚಾಯತಿ, ಲೋಕೋಪಯೋಗಿ ಮತ್ತು ತಾಪಂ ಅಧಿಕಾರಿಗಳು ಸರ್ವೇ ನಡೆಸಿ ನೀಡಿರುವ ವರದಿಯ ಪ್ರಕಾರ ರಸ್ತೆಯಿಂದ ಕಟ್ಟಡ ನಿರ್ಮಿಸುವ ದೂರವನ್ನು ಪ್ರಸ್ತುತ ಕಾನೂನಿಗೆ ಅನುಗುಣವಾಗಿ ಅನುಸರಿಸಿಲ್ಲ ಎಂದು ತಿಳಿಸಲಾಗಿದೆ. ಜತೆಗೆ ಜಿಲ್ಲಾ ಪಂಚಾಯಿತಿ ನಿಗದಿ ಪಡಿಸಿರುವ ಕಾನೂನು ಸಲಹೆಗಾರರು ಸಲ್ಲಿಸಿರುವ ವರದಿ ಎನ್‌ಒಸಿ ನೀಡುವುದಕ್ಕೆ ಆಕ್ಷೇಪ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಎನ್‌ಒಸಿ ನೀಡಲು ಸಾಧ್ಯವಿಲ್ಲ ಎಂದು ಪಿಡಿಒ ಸಭೆಗೆ ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ಬಹು ಸಂಖ್ಯಾತ ಸದಸ್ಯರು ಎನ್‌ಒಸಿ ಒದಗಿಸುವಂತೆ ಒಪ್ಪಿಗೆ ಸೂಚಿಸಿದ್ದರೂ ಇದನ್ನು ಮಾನ್ಯ ಮಾಡದ ಅಧಿಕಾರಿ ಕ್ರಮವನ್ನು ವಿರೋಧಿಸಿ ಮನವಿಯೊಂದನ್ನು ನೀಡಿ ಸದಸ್ಯ ಗಣಪತಿ ನಾಯ್ಕ ಸಭಾವೇದಿಕೆಯಲ್ಲಿ ಪ್ರತಿಭಟನೆ ನಡೆಸಿದರು. ಯಾವುದೇ ನಿರ್ಧಾರಕ್ಕೆ ಬಾರದೇ ಎರಡನೆ ಬಾರಿಗೆ ಸಭೆ ಮುಂದೂಡಲ್ಪಟ್ಟಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net