ನೇಹಾ ಹತ್ಯೆ ಖಂಡಿಸಿ ಪ್ರತಿಭಟನೆ

Protest against Neha's murder
ಹುಬ್ಬಳಿಯಲ್ಲಿ ನಡೆದ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಹುನಗುಂದ ತಾಲೂಕಿನ ಪ್ರಗತಿಪರ ಸಂಘಟನೆಯಿಂದ ತಹಸೀಲ್ದಾರ್ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಲಾಯಿತು. ಮಹಾಂತಯ್ಯ ಗಚ್ಚಿನಮಠ, ನಾಗರಾಜ ಹೊಂಗಲ, ವಿಶ್ವನಾಥ ಹಿರೇಮಠ, ಕೃಷ್ಣಾ ಜಾಳಿಹಾಳ ಇದ್ದರು.
Published on

ಹುನಗುಂದ: ಹುಬ್ಬಳ್ಳಿಯಲ್ಲಿ ನಡೆದಿರುವ ನೇಹಾ ಹಿರೇಮಠ ಹತ್ಯೆ ಖಂಡಿಸಿ ಹುನಗುಂದ-ಇಳಕಲ್ಲ ತಾಲೂಕಿನ ಪ್ರಗತಿಪರ ಸಂಘಟನೆಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ, ತಾಲೂಕು ಬೇಡ ಜಂಗಮ ಸಮಾಜ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಪಟ್ಟಣದ ವಿಜಯ ಮಹಾಂತೇಶ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿದರು.

ಮಹಾಂತಯ್ಯ ಗಚ್ಚಿನಮಠ ಮಾತನಾಡಿ, ರಾಜ್ಯದಲ್ಲಿ 48 ಗಂಟೆಯಲ್ಲಿ 8 ಕೊಲೆ ನಡೆದಿದೆ ಎಂದರೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾಲೇಜಿನಲ್ಲೇ ಬರ್ಬರ ಕೊಲೆ ನಡೆದಿರುವುದು ಮಾನವ ಸಮಾಜ ತಲೆ ತಗ್ಗಿಸಬಹುದಾದ ದೊಡ್ಡ ಘಟನೆಯಾಗಿದೆ. ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಭಯದ ವಾತವರಣ ಉಂಟಾಗಿದೆ. ರಾಜ್ಯ ಗೃಹಮಂತ್ರಿ ಜಿ.ಪರಮೇಶ್ವರ ಈ ಘಟನೆ ಆಕಸ್ಮಿಕ ಎಂದು ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಇದು ಪೂರ್ವನಿಯೋಜಿತ ಕೊಲೆಯಾಗಿದೆ. ಕೂಡಲೇ ತಪ್ಪತಸ್ಥ ಫಯಾಜ್‌ನನ್ನು ವಿಚಾರಣೆ ನಡೆಸದೆ ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿದರು.

ಹೋರಾಟಗಾರ ನಾಗರಾಜ ಹೊಂಗಲ್ ಮಾತನಾಡಿ, ಹುಬ್ಬಳ್ಳಿಯ ವಿದ್ಯಾರ್ಥಿ ನೇಹಾ ಕೊಲೆಯ ಪ್ರಕರಣ ಅತ್ಯಂತ ಖಂಡನಾರ್ಹವಾಗಿದೆ. ರಾಜ್ಯದಲ್ಲಿ ಮೇಲಿಂದ ಮೇಲೆ ಇಂಥ ಘಟನೆಗಳು ಮರುಕಳುಹಿಸುತ್ತಿವೆ. ಆದರೆ ಘಟನೆ ಕೊಲೆ ಮಾಡುವ ಮಟ್ಟಕ್ಕೆ ಹೋಗಬಾರದು. ಯಾವುದೇ ವಿಚಾರಕ್ಕೆ ಆದ ಪ್ರಕರಣ ಬೇರೆ ಬೇರೆ ತಿರುವು ತೆಗೆದುಕೊಂಡು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದೆ. ಸರ್ಕಾರ ಶಾಲೆ, ಕಾಲೇಜಿನಲ್ಲಿ ಭದ್ರತಾ ವ್ಯವಸ್ಥೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಲೆ ಆರೋಪಿಯನ್ನು ಮುಲಾಜಿಲ್ಲದೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು. ಕರವೇ ಮುಖಂಡರಾದ ರೋಹಿತ ಬಾರಕೇರ, ಮಹಾಂತೇಶ ತೆಗ್ಗಿನಮಠ, ಶರಣು ಗಾಣಿಗೇರ ಮಾತನಾಡಿದರು.

ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಹುನಗುಂದ ತಾಲೂಕಿನ ಪ್ರಗತಿಪರ ಸಂಘಟನೆಯಿಂದ ತಹಸೀಲ್ದಾರ್ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಲಾಯಿತು. ವಿಶ್ವನಾಥ ಹಿರೇಮಠ, ಕೃಷ್ಣಾ ಜಾಳಿಹಾಳ, ಮಹಾಂತೇಶ ಮಠ, ಮುತ್ತಣ್ಣ ಕಲ್ಮಡಿ, ಮಹಾಂತೇಶ ಚಿತ್ತವಾಡಗಿ, ಮುತ್ತಣ್ಣ ಹವಾಲ್ದಾರ, ಅಕ್ಷಯ್ಯ ಕಂಬಾಳಿಮಠ, ಮಹಾಂತೇಶ ಕಂಬಾಳಿಮಠ, ಮಲ್ಲಣ್ಣ ಕಮರಿ, ಅಕ್ಷಯ ಕಂಬಾಳಿಮಠ, ಹುಸೇನ ಸಂದಿಮನಿ, ಅಬೂಬಕರ್ ಸಂಗಮಕರ, ಚನ್ನಬಸಯ್ಯ ಹಿರುಳ್ಳಿಮಠ, ಹುಚ್ಚಯ್ಯ ವಸದ, ಬಸವರಾಜ ಕಂಬಾಳಿಮಠ, ರಾಜಶೇಖರ ಕೂಡಲಗಿಮಠ, ಶರಣಯ್ಯ ಮಾಲಿ, ವಿರೇಶ ತಾವರಗೇರಿ, ಮಂಜುನಾಥ ಮುಂಡೇವಾಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net