ನಾಡಗೀತೆ ಹೊಸ ಸುತ್ತೋಲೆ ಖಂಡಿಸಿ ಪ್ರತಿಭಟನೆ

h21-abvp
Published on

ಹುಬ್ಬಳ್ಳಿ: ಸರ್ಕಾರಿ, ಅನುದಾನಿತ ಶಾಲೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ನಾಡಗೀತೆಯನ್ನು ಮಾತ್ರ ಕಡ್ಡಾಯವಾಗಿ ಹಾಡಬೇಕೆಂದು ಸರ್ಕಾರ ಇತ್ತೀಚೆಗೆ ಹೊಸ ಸುತ್ತೋಲೆ ಹೊರಡಿಸಿರುವುದು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಇಲ್ಲಿನ ವಿದ್ಯಾನಗರದ ಬಿವಿಬಿ ಕಾಲೇಜ್ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ರಾಷ್ಟ್ರಕವಿ ಕುವೆಂಪು ರಚಿತ ಹಾಗೂ ರಾಜ್ಯದ ಅಧಿಕೃತ ನಾಡಗೀತೆಯಾದ ‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಎಂಬುದು ನಾಡಿನ ವೈದ್ಯ ಪರಂಪರೆ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ಈ ಹಿಂದೆ ಎಲ್ಲ ಅಧಿಕೃತ ಶಾಲೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ದೈನಂದಿನ ಚಟುವಟಿಕೆಗಳು ಪ್ರಾರಂಭವಾಗುವ ಮುನ್ನ ಹಾಡುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಇತ್ತೀಚಿನ ಸುತ್ತೋಲೆಯಲ್ಲಿ ಎಲ್ಲ ಶಾಲೆಗಳಲ್ಲಿ ಎನ್ನುವ ಪದ ಕೈ ಬಿಟ್ಟು ಕೇವಲ ಸರ್ಕಾರಿ ಹಾಗೂ ಅನುದಾನಿತ ಶಾಲೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ನಾಡಗೀತೆ ಹಾಡಬೇಕೆಂದು ತಿದ್ದುಪಡಿ ಮಾಡಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಹೊಸ ಸುತ್ತೋಲೆಯಿಂದ ಪ್ರತಿಯೊಬ್ಬ ಕನ್ನಡಿಗನ ಅಂತಹಕರಣ ಕಲುಕಿದಂತಾಗಿದೆ. ನಮ್ಮ ನಾಡಿನ ಮಕ್ಕಳಲ್ಲಿ ತಾಯ್ನಡಿನ ಅಭಿಮಾನವನ್ನು ಜಾಗೃತಿಗೊಳಿಸುತ್ತಿದ್ದ ಏಕೈಕ ಮಾರ್ಗವನ್ನು ಸರ್ಕಾರ ತೊಡೆದು ಹಾಕಿದೆ ಎಂದು ದೂರಿದರು.
ಕೂಡಲೇ ಸರ್ಕಾರ ನಾಡಗೀತೆ ಬಗ್ಗೆ ಹೊರಡಿಸಿದ ಹೊಸ ಸುತ್ತೋಲೆ ರದ್ದುಪಡಿಸಿ, ಮೊದಲಿನಂತೆಯೇ ಎಲ್ಲರೂ ಕಡ್ಡಾಯವಾಗಿ ನಾಡಗೀತೆ ಹಾಡುವಂತೆ ಆದೇಶ ಹೊರಡಿಸಬೇಕು. ಒಂದು ವೇಳೆ ಸರ್ಕಾರ ತನ್ನ ನಿರ್ಧಾರ ಬದಲಿಸದೆ ಹೋದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು. ಪೃಥ್ವಿರಾಜ, ಸುಶೀಲ ಇಟಗಿ, ಸಿದ್ಧಾರ್ಥ, ರಮೇಶ, ಸುಪ್ರೀತ, ನಾಗರಾಜ ಎಸ್. ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net