

ಮೈಸೂರು: ಜಾತಿ ನಿಂದನೆ ಮಾಡಿದ ಮುನಿರತ್ನ ಶಾಸಕ ಸ್ಥಾನ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ದಲಿತ ಸಂಘರ್ಷ ಸಮಿತಿ ವತಿಯಿಂದ ಪುರಭವನ ಆವರಣದ ಅಂಬೇಡ್ಕರ್ ಪ್ರತಿಮೆ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ಸ್ವಾತಂತ್ರೃ ಬಂದು 77 ವರ್ಷಗಳು ಕಳೆಯುತ್ತಿದ್ದರೂ ದೇಶದ ಕೆಲವು ಜನಪ್ರತಿನಿಧಿಗಳು ನಡೆದುಕೊಳ್ಳುವ ರೀತಿ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ ಇದೆ. ಸಮಾಜವನ್ನು ಉತ್ತಮ ದಿಕ್ಕಿನ ಕಡೆಗೆ ಮುನ್ನಡೆಸಬೇಕಾದ ಜನಪ್ರತಿನಿಧಿಗಳೇ ಜಾತಿ ನಿಂದನೆ ಮಾಡಿರುವುದು ಖಂಡನೀಯ. ಮುನಿರತ್ನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಶಾಸಕ ಮುನಿರತ್ನ ಹಣ ಹಾಗೂ ಅಧಿಕಾರ ಬಲದಿಂದ ದಲಿತ ಗುತ್ತಿಗೆದಾರರನ್ನು ಬಹಳ ನಿಕೃಷ್ಟವಾಗಿ ನಡೆಸಿಕೊಂಡು ಜಾತಿ ಹೆಸರಿಡಿದು ಬಾಯಿಗೆ ಬಂದಂತೆ ಮಾತನಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ನಾಗರಿಕ ಸಮಾಜ ಇಂತಹ ಅವಿವೇಕಿಗಳ ನಡತೆಯನ್ನು ತೀವ್ರವಾಗಿ ಖಂಡಿಸಬೇಕಿದೆ ಎಂದು ದಸಂಸ ಮುಖಂಡರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಹರಿಹರ ಆನಂದಸ್ವಾಮಿ, ಅಹಿಂಹ ಜವರಪ್ಪ, ದೇವಗಳ್ಳಿ ಸೋಮಶೇಖರ್, ಅರ್ಜುನಹಳ್ಳಿ ಶಾಂತರಾಜು, ಬೆಲವತ್ತ ರಾಮಚಂದ್ರ, ಪ್ರಸನ್ನ ತಳೂರು, ಬಂಗವಾಡಿ ನಾರಾಯಣಪ್ಪ, ಶ್ಯಾದನಹಳ್ಳಿ ನಾರಾಯಣ, ಬೊಕ್ಕಹಳ್ಳಿ ಲಿಂಗಯ್ಯ, ಸಣ್ಣಸ್ವಾಮಿ ಹಾಗೂ ಇತರರು ಇದ್ದರು.