ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ದುರ್ಬಳಕೆ ವಿರೋಧಿಸಿ ಪ್ರತಿಭಟನೆ

Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ದಲಿತ ಜನಾಂಗಕ್ಕೆ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ನರಸಿಂಹರಾಜ (ಎನ್.ಆರ್.) ಕ್ಷೇತ್ರದ ಬಿಎಸ್‌ಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ವರ್ಗ, ಪಂಗಡದ ಜನರಿಗೆ ಅನುಕೂಲ ಮಾಡಿಕೊಡುವುದಾಗಿ ಭಾಷಣ ಮಾಡುವ ಸಿದ್ದರಾಮಯ್ಯ, ಅವರಿಗೆ ಮೀಸಲಿಟ್ಟಿದ್ದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದ್ದಾರೆ. ಇದು ಎಸ್‌ಸಿ, ಎಸ್‌ಟಿ ವರ್ಗದವರಿಗೆ ಕತ್ತು ಕುಯ್ಯುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಯೋಜನೆಯಿಂದ 2023-24 ಮತ್ತು 2024-25ನೇ ಸಾಲಿನ 2 ವರ್ಷಗಳಲ್ಲಿ 25,390 ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳಲಾಗಿದೆ. ಈವರೆಗೆ ಈ ರೀತಿಯಾಗಿ 70 ಸಾವಿರ ಕೋಟಿ ರೂ. ದುರ್ಬಳಕೆಯಾಗಿದೆ. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಿಂದ ಈವರೆಗೆ 2.56 ಲಕ್ಷ ಕೋಟಿ ರೂ. ಪಡೆಯಲಾಗಿದೆ. ಇಷ್ಟು ಹಣದಿಂದ ಎಸ್‌ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದಿಂದ ಬಿಇ, ಎಂಬಿಬಿಎಸ್, ಪಿಎಚ್.ಡಿ ವರೆಗೆ ಉಚಿತ ಶಿಕ್ಷಣ ನೀಡಬಹುದಿತ್ತು. ಲಕ್ಷಾಂತರ ಮಂದಿ ಪ.ಜಾತಿ, ಪ.ಪಂಗಡದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಒದಗಿಸಬಹುದಿತ್ತು. ಮನೆ ಇಲ್ಲದ ಪ್ರತಿಯೊಂದು ಪ.ಜಾತಿ, ಪ.ಪಂಗಡ ಕುಟುಂಬಕ್ಕೆ ಸ್ವಂತ ಮನೆ ಕಟ್ಟಿಕೊಡಬಹುದಿತ್ತು. ಭೂ ರಹಿತ ಪರಿಶಿಷ್ಟ ಕೃಷಿ ಕಾರ್ಮಿಕರಿಗೆ ತಲಾ 5 ಎಕರೆ ಜಮೀನು ಖರೀದಿಸಿ ಕೊಡಬಹುದಿತ್ತು. ಪ್ರತಿಯೊಬ್ಬ ಎಸ್ಸಿ, ಎಸ್ಟಿ ರೋಗಿಗಳಿಗೂ ಉಚಿತ ಚಿಕಿತ್ಸೆ ಕೊಡಿಸಬಹುದಿತ್ತು. ಪ್ರತಿಯೊಬ್ಬ ಪರಿಶಿಷ್ಟ ರೋಗಿಗೂ ಉಚಿತ ಚಿಕಿತ್ಸೆ ಕೊಡಿಸಬಹುದಿತ್ತು ಎಂದು ಹೇಳಿದರು.
ಸಂವಿಧಾನ ಉಳಿಸುವುದಾಗಿ ಹೇಳುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪರಿಶಿಷ್ಟ ವಿದ್ಯಾರ್ಥಿಗಳ ಮೆರಿಟ್ ವಿದ್ಯಾರ್ಥಿವೇತನ ರದ್ದಾಗಿದೆ. ವಿದೇಶದಲ್ಲಿ ಓದಲು ರೂಪಿಸಿದ್ದ ಪ್ರಬುದ್ಧ ಯೋಜನೆ ನಿಲ್ಲಿಸಲಾಗಿದೆ, ಶಾಲಾ-ಕಾಲೇಜುಗಳಲ್ಲಿ ಪ್ರವೇಶ ಪಡೆಯುವಾಗ ಪೂರ್ಣ ಶುಲ್ಕ ಪಾವತಿಸುವಂತೆ ಮಾಡಲಾಗಿದೆ. ಎರಡು ವರ್ಷಗಳಿಂದ ಸರಿಯಾಗಿ ಎಸ್‌ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಓದುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಹಾಸ್ಟೆಲ್ ಪ್ರವೇಶ ರದ್ದುಗೊಳಿಸಲಾಗಿದೆ, ಬ್ಯಾಕ್‌ಲಾಗ್ ಹುದ್ದೆ ಭರ್ತಿ ಮಾಡಿಲ್ಲ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ನೀಡುತ್ತಿಲ್ಲ ಎಂದು ದೂರಿದರು. ಬಿಎಸ್ಪಿ ಮುಖಂಡರಾದ ಚಂದ್ರಶೇಖರ್, ಪುಷ್ಪಾ, ಬಸವಣ್ಣ, ನಂಜುಂಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net