ನರೇಗಾ ಹಣ ದುರುಪಯೋಗ ಖಂಡಿಸಿ ಧರಣಿ

MARCH-2025-17-04
Published on

ಮದ್ದೂರು: ಸರಿಯಾಗಿ ಕರ್ತವ್ಯ ನಿರ್ವಹಿಸದೆ ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ಕ್ರಮ ಖಂಡಿಸಿ ಹಾಗೂ ಭ್ರಷ್ಟಾಚಾರ ವಿರೋಧಿಸಿ ರೈತ ಸಂಘಟನೆಯ ಕಾರ್ಯಕರ್ತರು ಕೆಸ್ತೂರು ಗ್ರಾ.ಪಂ.ಕಚೇರಿ ಬಳಿ ಪ್ರತಿಭಟನೆ ನಡೆಸಿ ತಾಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಲೂಕಿನ ಕೆಸ್ತೂರು ಬಸ್ ನಿಲ್ದಾಣದ ಬಳಿ ಆಗಮಿಸಿದ ಸಂಘಟನೆ ಕಾರ್ಯಕರ್ತರು, ಗ್ರಾಮಸ್ಥರು, ಅಧಿಕಾರಿಗಳ ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಗ್ರಾ.ಪಂ.ನಲ್ಲಿ ನಡೆದಿರುವ ಅವ್ಯವಹಾರಗಳ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು.

ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದಿದ್ದರೂ ಕಾಮಗಾರಿ ಹೆಸರಿನಲ್ಲಿ ಲಕ್ಷಾಂತರ ರೂ.ದುರುಪಯೋಗ ಪಡಿಸಿಕೊಂಡಿದ್ದು ಕಳೆದ ಮೂರು ವರ್ಷಗಳಿಂದ ವಿವಿಧ ಕಾಮಗಾರಿಗಳಿಗೆ ಬಿಡುಗಡೆಗೊಂಡಿದ್ದ ಸುಮಾರು 28 ಕಾಮಗಾರಿಗಳ ಹಣವನ್ನು ದುರುಪಯೋಗ ಪಡಿಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಹಿನ್ನೆಡೆ ಉಂಟುಮಾಡಿದ್ದಾರೆಂದು ಆರೋಪಿಸಿದರು.

15ನೇ ಹಣಕಾಸು ಯೋಜನೆಯಡಿ ಕೈಗೊಂಡಿರುವ ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರು ಇನ್ನಿತರ ಕಾಮಗಾರಿಗಳ ನೆಪದಲ್ಲಿ ಹಣವನ್ನು ಬಳಕೆ ಮಾಡಿಕೊಂಡಿರುವ ಅಂದಿನ ಪಿಡಿಒ ಹಾಗೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಶಾಮೀಲಾಗಿದ್ದರೂ ಮೇಲಾಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ದೂರಿದರು.

ಇದುವರೆಗೂ ಗ್ರಾಮಸಭೆ, ಮಹಿಳಾಸಭೆ, ಕೆಡಿಪಿ ಸಭೆಗಳನ್ನು ನಡೆಸದೆ ಅಧಿಕಾರಿಗಳು ನಿರ್ಲಕ್ಷೃ ಧೋರಣೆ ತಾಳಿದ್ದಾರೆ.

ಇದರಿಂದ ರೈತರು, ಸಾರ್ವಜನಿಕರು ಪ್ರತಿನಿತ್ಯ ಗ್ರಾ.ಪಂ.ಕಚೇರಿಗೆ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಹಲವು ಯೋಜನೆಗಳು ಅರ್ಹ ಫಲಾನುಭವಿಗಳು ಪಡೆಯಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ ಎಂದರು.

ನರೇಗಾ ಯೋಜನೆಗೆ 15ನೇ ಹಣಕಾಸು ಯೋಜನೆಯನ್ನು ಬಳಕೆ ಮತ್ತು ವರ್ಗ-2ರ ಅನುದಾನ ದುರುಪಯೋಗ, ತಾಲೂಕಿನ ಅಡಗನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಬಿಡುಗಡೆಯಾದ 5 ಲಕ್ಷ ರೂ. ದುರುಪಯೋಗವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಾ.ಪಂ. ಇಒ ರಾಮಲಿಂಗಯ್ಯ ಕೆಸ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿರುವ ಅವ್ಯವಹಾರಗಳ ಸಂಬಂಧ ಸಮಗ್ರ ತನಿಖೆ ನಡೆಸುವ ಜತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಮತ್ತು ಮೂಲ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ರೈತ ಸಂಘದ ಮುಖಂಡ ವಳಗೆರೆಹಳ್ಳಿ ಉಮೇಶ್, ವಿನೋದ್‌ಬಾಬು, ಲಿಂಗಪ್ಪಾಜಿ, ಶಂಕರ್, ಶೆಟ್ಟಹಳ್ಳಿ ರವಿಕುಮಾರ್, ಜನಾರ್ದನ್, ಹರೀಶ್, ಚಂದ್ರಹಾಸ, ಚಂದ್ರು, ರಾಮಕೃಷ್ಣ ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net