ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಖಂಡಿಸಿ ಪ್ರತಿಭಟನೆ

7
Published on

ಮೈಸೂರು: ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ರೈತ ಸಮುದಾಯದ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.

ನಂಜನಗೂಡು ರಸ್ತೆಯ ಎಪಿಎಂಸಿ ರಿಂಗ್ ರೋಡ್ ವೃತ್ತದ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ಮಾನವ ಸರಪಳಿ ನಿರ್ಮಿಸಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಸಚಿವ ಶಿವಾನಂದ ಪಾಟೀಲ್ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತರು ಸಾಲ ಮನ್ನಾಕ್ಕಾಗಿ ಬರದ ನಿರೀಕ್ಷೆ ಮಾಡುತ್ತಾರೆಂದು ಸಚಿವ ಶಿವಾನಂದ ಪಾಟೀಲ್ ಹೇಳಿಕೆ ನೀಡಿ ರೈತ ಸಮುದಾಯದ ಅವಹೇಳನ ಮಾಡಿದ್ದಾರೆ. ಯಾವ ರೈತನೂ ಬರ ಬರಲಿ ಎಂದು ಕಾಯುವುದಿಲ್ಲ. ಮಾಡಿದ ಸಾಲದಲ್ಲಿ ಬೆಳೆ ಬೆಳೆದು ನಷ್ಟವಾದಾಗ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ. ಆದರೆ, ಸಾಲ ಮನ್ನಾ ಮಾಡಿ ಎಂದು ಯಾರೂ ಕೇಳುವುದಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಈ ರೀತಿಯ ಹೇಳಿಕೆ ನೀಡುವುದು ಖಂಡನೀಯ. ಅವರ ಈ ಹೇಳಿಕೆಯಿಂದ ರೈತರಿಗೆ ತೀವ್ರ ನೋವುಂಟಾಗಿದ್ದು ಕೂಡಲೇ ಕ್ಷಮೆಯಾಚಿಸಬೇಕು. ಭವಿಷ್ಯದಲ್ಲಿ ಈ ರೀತಿಯ ಹೇಳಿಕೆಗಳು ಪುನರಾವರ್ತನೆ ಆಗಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಾನಂದ ಪಾಟೀಲ್ ಅವರಿಗೆ ಸೂಕ್ತ ತಿಳಿವಳಿಕೆ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ರೈತ ಮುಖಂಡರಾದ ಪಿ.ಮರಂಕಯ್ಯ, ಪ್ರಸನ್ನ ಎನ್.ಗೌಡ ಶಿರಮಳ್ಳಿ ಸಿದ್ದಪ್ಪ, ವಿಜೇಂದ್ರ, ಮಂಡಕಳ್ಳಿ ಮಹೇಶ್, ಪ್ರೇಮ್‌ರಾಜ್, ಹೆಜ್ಜಿಗೆ ಪ್ರಕಾಶ್, ರಾಘವೇಂದ್ರ ಇತರರಿದ್ದರು.

ಕೆಲಕಾಲ ಟ್ರಾಫಿಕ್ ಜಾಮ್: ರೈತರು ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದ ಕಾರಣ ನಂಜನಗೂಡು ರಸ್ತೆಯ ಎಪಿಎಂಸಿ ರಿಂಗ್ ರೋಡ್ ವೃತ್ತದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ಪರಿಣಾಮ ವಾಹನ ಸವಾರರು ಸಮಸ್ಯೆ ಎದುರಿಸಿದರು. ಬಳಿಕ ಪೊಲೀಸರು ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net