

ಮಂಡ್ಯ: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಾತ್ರವಲ್ಲದೆ ಗೋಡೆಗಳ ಮೇಲೆ ಪ್ರಿಯಾಂಕ್ ಖರ್ಗೆ ಹಾಗೂ ರಾಜ್ಯಸರ್ಕಾರದ ವಿರುದ್ಧ ಫೋಸ್ಟರ್ ಅಂಟಿಸಿ ರಾಜೀನಾಮೆ ಕೊಡುವಂತೆ ಆಗ್ರಹಿಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಸಚಿವರು ಹಾಗೂ ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಾತ್ರವಲ್ಲದೆ ಪ್ರಿಯಾಂಕ್ ಖರ್ಗೆ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಪೋಸ್ಟರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಾಮಾಣಿಕ ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಂದೆಡೆ ಹಣ ವಸೂಲಿ ಮಾಡಿಕೊಡುವಂತೆ ಪ್ರಾಮಾಣಿಕ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಇದರಿಂದಾಗಿ ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಚಂದ್ರಶೇಖರ್, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪಿಎ ಹೆಸರು ಬರೆದಿಟ್ಟು ರುದ್ರಣ್ಣ ಎಂಬ ಅಧಿಕಾರಿ ಹಾಗೂ ಯಾದಗಿರಿಯಲ್ಲಿ ಪಿಎಸ್‌ಐ ಪರಶುರಾಮ ಆತ್ಮಹತ್ಯೆಗೆ ಶರಣಾದರು. ಇದಲ್ಲದೆ ರಾಮನಗರದಲ್ಲಿ ಅಧಿಕಾರಿಗಳ ಕಿರುಕುಳದಿಂದಾಗಿ ಮಾಗಡಿಯಲ್ಲಿ ಲಾರಿ ಮಾಲೀಕ ನಾಗೇಶ್ ಆತ್ಮಹತ್ಯೆ ಮಾಡಿಕೊಂಡರು. ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಆಪ್ತನ ಹೆಸರು ಉಲ್ಲೇಖಿಸಿ ಬೀದರ್ ಮೂಲದ ಗುತ್ತಿಗೆದಾರ ಸಚಿನ್ ಪಾಂಚಾಳ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸಚಿನ್ ಪಾಂಚಾಳ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಕೋಟಿ ರೂ ವೆಚ್ಚದ ಕಾಮಗಾರಿ ಕೊಡುವುದಾಗಿ 60 ಲಕ್ಷ ರೂ ಕಮಿಷನ್ ಪಡೆಯಲಾಗಿದೆ. ಆದರೆ ಆತನಿಗೆ ಕೆಲಸವೂ ಕೊಡದೇ, ಹಣವನ್ನು ವಾಪಸ್ ಕೊಡದೇ ಜೀವ ಬೆದರಿಕೆ ಹಾಕಲಾಗಿದೆ. ಆತ ಎರಡು ಬಾರಿ ದೂರು ಕೊಟ್ಟರೂ ಪೊಲೀಸರು ಸ್ವೀಕಾರ ಮಾಡಿಲ್ಲ. ಪರಿಣಾಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತುಂಬು ಕುಟುಂಬ ಮನನನ್ನು ಕಳೆದುಕೊಂಡು ಅನಾಥವಾಗಿದೆ. ಕಾಂಗ್ರೆಸ್ ನಾಯಕರು 10 ಲಕ್ಷ ರೂ ಕೊಡಲು ಹೋದಾಗ ಕುಟುಂಬದವರು ತಿರಸ್ಕರಿಸಿದ್ದಾರೆ. ನಮ್ಮ ಮನೆ ಮಗನ ಸಾವಿಗೆ ನ್ಯಾಯ ಕೊಡಿಸಿ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾರೆ. ಆ ಕುಟುಂಬದವರ ಕಣ್ಣೀರು ನೋಡಿದರೆ ಹೊಟ್ಟೆ ಉರಿಯುತ್ತದೆ. ಆದರೆ ಸಚಿವ ಪ್ರಿಯಾಂಕ್ ಖರ್ಗೆ ದುರಂಹಕಾರ ಮಾತುಗಳನ್ನಾಡಿದ್ದಾರೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ರಾಜೀನಾಮೆ ಕೊಡುವವರೆಗೂ ಚಳವಳಿ ನಡೆಯಲಿದೆ. ಈಗಾಗಲೇ ಕಿಲ್ಲರ್ ಖರ್ಗೆ ಹೆಸರಿನಲ್ಲಿ ಫೋಸ್ಟರ್ ಅಭಿಯಾನ ನಡೆಯುತ್ತಿದೆ. ಜ.4ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ನೊಂದ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಇಷ್ಟೆಲ್ಲ ಘಟನೆ ನಡೆಯುತ್ತಿದೆ. ಆದಾಗ್ಯೂ ಕಾಂಗ್ರೆಸ್ ಹೈಕಮಾಂಡ್ ತುಟ್ಟಿ ಬಿಚ್ಚುತ್ತಿಲ್ಲ. ಬಹುಶಃ ಕಾಂಗ್ರೆಸ್ ಹೈಕಮಾಂಡ್ ಸತ್ತು ಹೋಗಿದೆ. ರಾಜ್ಯದಿಂದ ಹಣ ವಸೂಲಿ ಮಾಡಿ ರಾಷ್ಟ್ರ ನಾಯಕರಿಗೆ ತಲುಪಿಸುವ ಕೆಲಸವನ್ನು ರಾಜ್ಯಸರ್ಕಾರ ಮಾಡುತ್ತಿದೆ. ಆ ಕಾರಣಕ್ಕೆ ಪ್ರಶ್ನೆ ಮಾಡುತ್ತಿಲ್ಲವೆಂದು ದೂರಿದ ಪ್ರತಿಭಟನಾಕಾರರು, ಕಾಂಗ್ರೆಸ್ ಸರ್ಕಾರದ ದುರಾಡಳಿತ ಮಿತಿ ಮೀರಿದೆ. ಅಭಿವೃದ್ಧಿ ಕೆಲಸ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಜನಪರ ಕಾರ್ಯಕ್ರಮವನ್ನು ನಿಲ್ಲಿಸಿದ್ದಾರೆ. ಇದಕ್ಕೆ ಜನರು ಮುಂದಿನ ದಿನದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾಧ್ಯಕ್ಷ ಇಂದ್ರೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಇಂಡುವಾಳು ಸಚ್ಚಿದಾನಂದ, ಅಶೋಕ್, ಸಿ.ಟಿ.ಮಂಜುನಾಥ್, ಶ್ರೀಧರ್, ಸಿದ್ದರಾಜುಗೌಡ, ಹೊಸಹಳ್ಳಿ ಶಿವು, ಶಿವಕುಮಾರ್ ಆರಾಧ್ಯ ಇತರರಿದ್ದರು.