ಮೈಕ್ರೋ ಫೈನಾನ್ಸ್ ದೌರ್ಜನ್ಯ ಖಂಡಿಸಿ ಪ್ರತಿಭಟನೆ

19 jkd-1 pro
ಜೆಕೆಡಿ 19-1 ಜಮಖಂಡಿ ನಗರದ ದೇಸಾಯಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವಾಹನ ಸಂಚಾರ ತಡೆದು ಮೈಕ್ರೋ ಫೈನಾನ್ಸ್ ಸಿಬ್ಬಂದಿ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
Published on

ಜಮಖಂಡಿ: ಮೈಕ್ರೋ ಫೈನಾನ್ಸ್ ಅವರ ದೌರ್ಜನ್ಯ ಖಂಡಿಸಿ ನಗರದಲ್ಲಿ ಮಹಿಳೆಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಮೋಮಿನ್ ಗಲ್ಲಿಯಿಂದ ದೇಸಾಯಿ ವೃತ್ತವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ದೇಸಾಯಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿ ಪೋಲಿಸ್ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಕಾಂಗ್ರೆಸ್ ಮುಖಂಡ ತೌಫಿಕ್ ಪಾರ್ಥನಳ್ಳಿ ಮಾತನಾಡಿ, ಮೈಕ್ರೋ ಫೈನಾನ್ಸ್‌ನವರು ಕಾನೂನು ವ್ಯಾಪ್ತಿ ಮೀರಿ ಮಹಿಳೆಯರ ಜತೆ ಅನುಚಿತವಾಗಿ ವರ್ತಿಸುತ್ತಿರುವುದು ಸರಿಯಲ್ಲ, ತಮ್ಮ ಪ್ರಾಪಂಚಿಕ ಅಡಚಣೆ, ಉದ್ಯೋಗ ಮಾಡಲು ಸಾಲಗಳನ್ನು ಪಡೆದುಕೊಂಡಿರುತ್ತಾರೆ. ಮೈಕ್ರೋ ಫೈನಾನ್ಸ್‌ನವರ ದೌರ್ಜನ್ಯ, ಅತ್ಯಾಚಾರದಂತ ಹೀನ ಕೃತ್ಯ ಎಸಗುತ್ತಿದ್ದಾರೆ. ಇದರ ಬಗ್ಗೆ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಕಾನೂನು ಚೌಕಟ್ಟಿನಲ್ಲಿ ಸಾಲ ನೀಡಲಿ, ಅದನ್ನು ಕಾನೂನು ನಿಯಮದಂತೆ ಸಾಲ ವಸೂಲಾತಿ ಮಾಡುವುದು ಬಿಟ್ಟು ಹಗಲು ರಾತ್ರಿ ಇಡೀ ಪ್ರತಿವಾರ, ತಿಂಗಳು ಮಹಿಳೆಯರ ಮನೆಗಳ ಮುಂದೆ ಕುಳಿತು ಸಾಲ ವಸೂಲಾತಿ ಕ್ರಮ ಸರಿಯಾದುದ್ದಲ್ಲ, ಹೀಗೆ ಮುಂದುವರಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಅಲ್ಪಸಂಖ್ಯಾತರ ರಾಜ್ಯ ಪ್ರಧಾನ ಕಾರ್ಯದರ್ಶಿ ರಫೀಕ್ ಬಾರಿಗಡ್ಡಿ ಮಾತನಾಡಿ, ಮಹಿಳೆಯರು ಸಂಸಾರಿಕ ಅಡಚಣೆಗಾಗಿ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಮದುವೆಗಾಗಿ ಸಾಲ ಪಡೆದುಕೊಂಡಿರುತ್ತಾರೆ. ಪ್ರತಿ ತಿಂಗಳು ಸಾಲ ಮರು ಪಾವತಿ ಮಾಡುತ್ತ ಬಂದಿರುತ್ತಾರೆ. ಆದರೆ, ಕೆಲವಂದಿಷ್ಟು ಮನೆಯಲ್ಲಿನ ತೊಂದರೆಯಿಂದ ಸಾಲ ಮರು ಪಾವತಿಸುವುದು ನಿಗದಿತ ದಿನಾಂಕದಂದು ತುಂಬದಿರುವ ವೇಳೆ ವಸೂಲಾತಿಗೆ ಬಂದ ಮೈಕ್ರೋಫೈನಾನ್ಸ್ ಸಿಬ್ಬಂದಿ ಮನೆಯಲ್ಲಿ ಪುರುಷರು ಇಲ್ಲದ ಸಮಯದಲ್ಲಿ ಬಂದು ಅವಾಚ್ಯ ಪದಗಳನ್ನು ಬಳಸಿ ಅವರಿಗೆ ಹೊಡೆಯುವುದು, ದಬ್ಬಾಳಿಕೆ ಮಾಡುವುದು, ಮನೆಯಲ್ಲಿನ ವಸ್ತುಗಳನ್ನು ಹಾಗೂ ಮೊಬೈಲ್‌ಗಳನ್ನು ಕಸಿದುಕೊಳ್ಳುವುದು. ಹೀಗೆ ರಾತ್ರಿ ಹೊತ್ತಿನಲ್ಲಿ ಬಂದು ಬಾಗಿಲಿನಲ್ಲಿ ಕುಳಿತು ದೌರ್ಜನ್ಯ ಮಾಡುತ್ತಿದ್ದಾರೆಂದು ಆರೋಪಿಸಿದರು.

ಸಾಲ ಪಡೆದುಕೊಂಡ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಮಹಿಳೆಯರಿಗೆ ಬೈಕ್ ಮೇಲೆ ಒತ್ತಾಯದಿಂದ ಕೂಡಿಸಿಕೊಂಡು ನಮ್ಮ ಮೇಲಧಿಕಾರಿಗಳನ್ನು ಭೇಟಿಯಾಗಿ ಎನ್ನುತ್ತಿದ್ದಾರೆ. ಹೀಗೆ ರಾತ್ರಿ ಸಮಯದಲ್ಲೂ ಬಂದು ಕಿರಿಕಿರಿ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮೇಲೆ ಹಾಗೂ ಇತರೆ ಬ್ಯಾಂಕ್ ಸಿಬ್ಬಂದಿ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ನ್ಯಾಯವಾದಿ ಶಶಿಕಾಂತ ದೊಡಮನಿ ಮಾತನಾಡಿದರು. ನೂರಜಹಾನ್ ಪಠಾಣ, ಶಭಾನಾ ರಫೀಕ್ ಖಲೀಫಾ, ರುಕ್ಸಾನಾ ಮೈಹಿಬೂಬ್ ಪಟೇಲ, ಮುಸ್ತಾಕ್ ಝೆಂಡೆ, ಅಬುಬಕರ್ ಕುಡಚಿ ಸೇರಿ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net