

ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದಿಂದ ಡಾ.ಮಹೇಶ ಜೋಶಿ ಅವರನ್ನು ವಜಾಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸಂಘಟನೆಗಳ ಕಾರ್ಯಕರ್ತರು, ಮಹೇಶ ಜೋಶಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಾತ್ರವಲ್ಲದೆ ಕೋಳಿ ಮೊಟ್ಟೆಯನ್ನು ತೋರಿಸಿ ವ್ಯಂಗ್ಯವಾಡಿದರು. ಅಂತೆಯೇ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಮ್ಮೇಳನ ನಡೆಸುವ ಸಂದರ್ಭದಲ್ಲಿ ಡಾ.ಮಹೇಶ ಜೋಶಿ ಅವರು ಉದ್ಧಟತನ ತೋರಿದ್ದಾರೆ. ಸಮ್ಮೇಳನಕ್ಕೆ ಸಂಬಂಧಿಸಿದಂತೆ ಇಲ್ಲಿವರೆಗೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಿಲ್ಲ. ಸಮ್ಮೇಳನದ ಖರ್ಚು ವೆಚ್ಚದ ಲೆಕ್ಕ ಕೊಟ್ಟಿಲ್ಲ. ಆದ್ದರಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಮೇ 17ರಂದು ನಗರದಲ್ಲಿ ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರದಿಂದ ಸಾಹಿತಿಗಳು ಹಾಗೂ ವಿಚಾರವಂತರ ನೇತೃತ್ವದಲ್ಲಿ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಗತಿಪರರು ಹಾಗೂ ಹಲವು ಸಂಘಟನೆಗಳು ಸೇರಿದಂತೆ ಮಹಿಳಾಪರ ಹೋರಾಟಗಾರರು ಆಗಮಿಸುತ್ತಿದ್ದಾರೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ನಾಡಿನಾದ್ಯಂತ ಮಹೇಶ ಜೋಶಿ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳುತ್ತಿದ್ದು, ಅವರನ್ನು ಅಧಿಕಾರದಿಂದ ವಜಾ ಮಾಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಸಭೆಗೆ ಬರಬೇಕಿತ್ತು. ಆದರೆ ಏಕೆ ಬರಲಿಲ್ಲ. ಅವರ ಗೈರಿನಲ್ಲಿಯೇ ಸ್ಮರಣ ಸಂಚಿಕೆ ಬಿಡುಗಡೆ ಮಾಡಬಹುದು ಎಂಬುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಸಮ್ಮೇಳನ ನಡೆದು ಐದು ತಿಂಗಳು ಮುಗಿದಿದ್ದರೂ ಇನ್ನೂ ಲೆಕ್ಕವನ್ನು ಕೊಟ್ಟಿಲ್ಲ. ಅಧಿಕಾರನ್ನು ಬಿಟ್ಟು ತನಿಖೆಯನ್ನು ಎದುರಿಸಬೇಕು. ಜಿಲ್ಲಾ ಮತ್ತು ತಾಲೂಕು ಸಮಾವೇಶಕ್ಕೆ ಕೊಟ್ಟಿರುವ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ಇದೇ ಮೊದಲು. ಇದರ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮನವಿ ನೀಡಿ ವಜಾ ಮಾಡುವುದಕ್ಕೆ ಒತ್ತಾಯಿಸಿದ್ದು, ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ. ನಮ್ಮೆಲ್ಲರ ಹೋರಾಟ ಮಹೇಶ ಜೋಶಿ ಅವರನ್ನು ಮನೆಗೆ ಕಳುಹಿಸುವುದು. ಈ ಮೂಲಕ ಕಸಾಪ ಉಳಿಸುವುದು. ಇಂತಹ ಕಳಂಕ ಹಿಂದೆಂದೂ ಪರಿಷತ್‌ಗೆ ಬಂದಿರಲಿಲ್ಲ. ಇದೆಲ್ಲವನ್ನು ಖಂಡಿಸಿ ಹೋರಾಟ ಮಾಡುತ್ತಿದ್ದೇವೆ ಎಂದು ಕಿಡಿಕಾರಿದರು.
ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಮಾತನಾಡಿ, ಜೋಶಿ ಅವರಿಗೆ ಬುದ್ದಿ ಕಲಿಸಲು, ನಾವು ಮಂಡ್ಯದಲ್ಲಿ ಮನಸ್ಕರರು ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಪ್ರತಿಭಟನೆ ಮಾಡುತ್ತಿದ್ದೇವೆ. ಜೋಶಿ ಅವರೇ ಮಂಡ್ಯದವರು ಕೊಟ್ಟ ಅನ್ನವನ್ನು ಮರೆತುಬಿಟ್ಟರಾ?. ಮಂಡ್ಯಕ್ಕೆ ಪೊಲೀಸರ ರಕ್ಷಣೆಯಲ್ಲಿ ಬರುತ್ತೇವೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.
ಮಹೇಶ ಜೋಶಿ ಅವರ ನಡೆ ಖಂಡನೀಯವಾಗಿದೆ. ಶುಕ್ರವಾರ ಯಾವ ಕಾರಣಕ್ಕೆ ಬಂದಿಲ್ಲ ಎನ್ನುವುದು ಗೊತ್ತಿಲ್ಲ. ನೀವು ಮಂಡ್ಯಕ್ಕೆ ಬರಬೇಕಾದರೆ ನಿಮ್ಮ ಮೇಲಿರುವ ಕಳಂಕವನ್ನು ತೊಳೆದುಕೊಂಡು ಬರಬೇಕು. ಕಸಾಪ ಎಂದರೆ ಅದಕ್ಕೆ ಆದ ಮೌಲ್ಯವಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಇದು ಎಚ್ಚರಿಕೆ ಮಾತಾಗಿದೆ, ನೀವು ತೆಗೆದುಕೊಳ್ಳುತ್ತಿರುವ ತೀರ್ಮಾನ ಪರಿಷತ್ ವಿರೋಧಿಯಾಗಿದೆ ಎಂದು ಆರೋಪಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಸ್ಮರಣ ಸಂಚಿಕೆ ಬಗ್ಗೆ ನೀವು ಹೇಳಿರುವ ಬಗ್ಗೆ ಕ್ರಮ ವಹಿಸಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್‌ಗೆ ಅದರದೇ ಆದ ಸ್ಥಾನಮಾನವಿದೆ. ಅಧ್ಯಕ್ಷರಿಗೂ ಮನವಿ ಮಾಡಿ ಹೇಳಲಾಗಿತ್ತು. ಸ್ಮರಣ ಸಂಚಿಕೆಯ ಹೊರತರಲು ಕೆಲಸ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರ ಒಪ್ಪಿಗೆ ಪಡೆದು ಪ್ರತಿಗಳನ್ನು ಹಂಚಲು ಸಮಯ ಕೇಳಲಾಗುವುದು. ಜತೆಗೆ ಸಭೆಯನ್ನು ಕರೆದಿದ್ದೇವೆ. ಅಲ್ಲಿ ಎಲ್ಲವನ್ನೂ ಅಂತಿಮ ಮಾಡೋಣ. ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗುವುದು ಎಂದು ವಿವರಿಸಿದರು.
ಪ್ರತಿಭಟಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಕೆ.ಬೋರಯ್ಯ, ಸಿ.ಕುಮಾರಿ, ಟಿ.ಎಲ್.ಕೃಷ್ಣೇಗೌಡ, ನರಸಿಂಹಮೂರ್ತಿ, ಅಭಿಗೌಡ, ಜಯರಾಂ, ಯೋಗಣ್ಣ, ಮುದ್ದೇಗೌಡ, ಶಶಿಕಲಾ, ಕೃಷ್ಣಪ್ರಕಾಶ್, ಪಣ್ಣೇದೊಡ್ಡಿ ಹರ್ಷ, ಮಹೇಶ್, ಸುರೇಶ್, ಚಂದಗಾಲು ಲೋಕೇಶ್, ಎಂ.ವಿ.ಧರಣೇಂದ್ರಯ್ಯ, ಕಾರಸವಾಡಿ ಮಹದೇವು, ಸುರೇಶ್ ಕೀಲಾರ, ಲಂಕೇಶ್ ಮಂಗಲ, ಹುರುಗಲವಾಡಿ ರಾಮಯ್ಯ ಇತರರಿದ್ದರು.