

ಮಂಡ್ಯ: ಆನೇಕಲ್ ತಿಮ್ಮಯ್ಯ ಚಾರಿಟೀಸ್ ಟ್ರಸ್ಟ್‌ನ ದತ್ತಿ ಆಸ್ತಿಯನ್ನು ಆಕ್ರಮಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಿರುದ್ಧ ನಗರದಲ್ಲಿ ಸರ್ವ ಬಣಜಿಗರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಯಿತು.
ಶ್ರೀ ಯೋಗೀನಾರೇಯಣ ಸಮುದಾಯ ಭವನದಿಂದ ಶಾಂತಿಯುತವಾಗಿ ಮೆರವಣಿಗೆ ಹೊರಟ ಸಂಘದ ಸದಸ್ಯರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಹಲವು ವರ್ಷದಿಂದ ಬಾಡಿಗೆ ಕೊಡದೆ ಕೋಟ್ಯಂತರ ರೂ. ಉಳಿಸಿಕೊಂಡು ದತ್ತಿ ಆಸ್ತಿಯ ಉಳಿದ ಜಾಗವನ್ನೂ ಕಾನೂನು ಬಾಹಿರವಾಗಿ ಆಕ್ರಮಿಸಿಕೊಂಡಿರುವುದನ್ನು ಪ್ರಶ್ನಿಸಿದ ಬಲಿಜ ಸಂಘದ ಪದಾಧಿಕಾರಿಗಳನ್ನು ಅವಮಾನಿಸಿ, ಸುಳ್ಳು ದೂರು ದಾಖಲಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಹೇಳಿಕೆಯನ್ನು ವಾಪಸ್ ಪಡೆಯಬೇಕು. 7.50 ಕೋಟಿ ರೂ. ಬಾಡಿಗೆ ಉಳಿಸಿಕೊಂಡಿರುವುದನ್ನು ಪಾವತಿ ಮಾಡಬೇಕು. ಆಕ್ರಮಿತ ಜಾಗವನ್ನು ಸಂಘಕ್ಕೆ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಂ.ಎಸ್.ವೆಂಕಟೇಶ್‌ಬಾಬು, ಎಂ.ವಿ.ನಾರಾಯಣಸ್ವಾಮಿ, ಕೆ.ನಾಗಾನಂದ, ಎಂ.ಕೆ. ಜಗದೀಶ್, ಎಂ.ಎಸ್.ಪ್ರಶಾಂತ್, ಎಚ್.ಪಿ.ಮೋಹನ್ ಇತರರಿದ್ದರು.