

ಕೆ.ಆರ್.ನಗರ: ವಕೀಲರ ಮೇಲೆ ಕೆಎಸ್‌ಆರ್‌ಟಿಸಿ ಚಾಲಕನಿಂದ ಹಲ್ಲೆ ಖಂಡಿಸಿ ವಕೀಲರು ಶುಕ್ರವಾರ ದಿನದ ಕಲಾಪದಿಂದ ಹೊರಗೊಳಿದು ಪ್ರತಿಭಟನೆ ನಡೆಸಿದರು.
ತಾಲೂಕು ವಕೀಲರ ಸಂಘದ ಸದಸ್ಯರಾಗಿರುವ ಭೇರ್ಯ ಗ್ರಾಮದ ಪ್ರಾಂಜಲ್ ಅವರಿಗೆ ಹಾಸನ ಬಸ್ ಘಟಕದ ಚಾಲಕ ಪಾಂಡುಕುಮಾರ್ ಗುರುವಾರ ಬೆಳಗ್ಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು ಇದರ ಜತೆಗೆ ಸಂಚಾರ ನಿಯಂತ್ರಕ ಕರಿಯಪ್ಪ ಮತ್ತು ನಿಲ್ದಾಣದ ಕಾವಲುಗಾರ ಸುಧಾಕರ್ ಎಂಬುವವರು ಅವರ ಮೇಲೆ ದಾಳಿ ನಡೆಸಿದ್ದಾರೆ. ಇದು ಖಂಡನೀಯ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ವಕೀಲರ ರಕ್ಷಣೆಗೆ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಪದೇಪದೆ ಇಂತಹ ಘಟನೆಗಳು ನಡೆಯುತ್ತಿವೆ. ನಾವುಗಳು ನಿರ್ಭೀತಿಯಿಂದ ಕೆಲಸ ನಿರ್ವಹಿಸಲು ತೊಂದರೆಯಾಗಿದೆ. ಮುಖ್ಯಮಂತ್ರಿಗಳು ಮತ್ತು ಕಾನೂನು ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಪ್ರಾಂಜಲ್ ಅವರು ವಕೀಲ ಎಂದು ತಿಳಿದಿದ್ದರೂ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿರುವ ಮೂವರನ್ನು ಕೂಡಲೇ ಸೇವೆಯಿಂದ ಅಮಾನತುಪಡಿಸಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಘಟನೆಯ ಸಂಬಂಧ ಚಾಲಕ ಪಾಂಡುಕುಮಾರ್, ಸಂಚಾರ ನಿಯಂತ್ರಕ ಕರಿಯಪ್ಪ ಮತ್ತು ನಿಲ್ದಾಣದ ಕಾವಲುಗಾರ ಸುಧಾಕರ್ ಅವರ ವಿರುದ್ಧ ದೂರು ದಾಖಲಾಗಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ವಕೀಲರಾದ ಎಸ್.ಎಸ್. ಗಾಂಧಿ, ವಿಜಯಕುಮಾರ್, ಜಯರಾಮೇಗೌಡ, ಡಿ.ಸಿ.ಗೋವಿಂದರಾಜು, ಕೆ.ಸಿ.ಹರೀಶ್, ಎಚ್.ಕೆ.ಪ್ರದೀಪ್, ಪ್ರಭಾವತಿ, ಪೂರ್ಣಿಮಾ ಅಂಬಿಕಾ, ಎಚ್.ಕೆ.ಉದಯ್, ತಿಮ್ಮೇಗೌಡ, ಕೆ.ಎನ್.ಸತೀಶ್, ಎಲ್.ವಿ.ರವಿಶಂಕರ್, ಕೆ.ಡಿ.ಮಂಜುನಾಥ್, ಎಂ.ಸಿ.ಶಶಿಕಾಂತ್, ಎ.ತಿಮ್ಮಪ್ಪ, ಡಿ.ಆರ್.ರಮೇಶ್, ಎಲ್.ಎಂ.ಚೇತನ್, ಮಹದೇವಸ್ವಾಮಿ, ಲಕ್ಷ್ಮಣೇಗೌಡ, ರವಿಪ್ರಕಾಶ್, ಎಂ.ಪ್ರಸನ್ನ, ಬಿ.ಜೆ.ಪೃಥ್ವಿರಾಜ್, ಶಿವರಾಜು, ಸುನೀಲ್, ವಿಶ್ವನಾಥ್ ಇತರರು ಇದ್ದರು.