ವಕೀಲ ರಾಕೇಶ್ ಕಿಶೋರ್ ವಿರುದ್ಧ ಕ್ರಮಕ್ಕೆ ಆಗ್ರಹ: ಅವಕಾಶ ವಂಚಿತ ಸಮುದಾಯ ವೇದಿಕೆ ಪ್ರತಿಭಟನೆ

Protest against lawyer Rakesh Kishore Mandya
Published on

ಮಂಡ್ಯ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯಲೆತ್ನಿಸಿರುವ ವಕೀಲ ರಾಕೇಶ್ ಕಿಶೋರ್ ಮತ್ತು ಆ ಕೃತ್ಯವನ್ನು ಪ್ರಶಂಸಿಸಿರುವ ನಿವೃತ್ತ ಪೋಲಿಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಅವಕಾಶ ವಂಚಿತ ಸಮುದಾಯಗಳ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಘಟನೆ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಮೇಲೆ ಮತ್ತು ಕೃತ್ಯವೆಸಗಿದ ರಾಕೇಶ್ ಕಿಶೋರ್ ಇಬ್ಬರನ್ನೂ ಗಲ್ಲಿಗೇರಿಸಬೇಕು. ಅಲ್ಲಿಯವರೆಗೆ ಭಾಸ್ಕರ್‌ರಾವ್ ಅವರನ್ನು ಕರ್ನಾಟಕದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ರಾಕೇಶ್ ಕಿಶೋರ್ ಸನಾತನಿ. ಆತ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿರುವುದನ್ನು ಭಾರತದ ಪ್ರತಿಯೊಬ್ಬರೂ ಖಂಡಿಸುತ್ತಿದ್ದಾರೆ. ಹೀಗಿರುವಾಗ ಕರ್ನಾಟಕದಲ್ಲಿ ಕಾನೂನು ಪಾಲಿಸುವ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತಿ ಹೊಂದಿರುವ ಭಾಸ್ಕರ್ ರಾವ್ ಅವರು ರಾಕೇಶ್ ಕಿಶೋರ್ ಅವರ ದೇಶದ್ರೋಹದ ಕೃತ್ಯವನ್ನು ಪ್ರಶಂಸಿಸುವ ಮೂಲಕ ಸಮಾಜ ಮತ್ತು ಯುವ ಪೀಳಿಗೆಗೆ ತಪ್ಪು ಸಂದೇಶವನ್ನು ಕೊಟ್ಟು ದೇಶ ವಿರೋಧಿ ಚಟುವಟಿಕೆಗಳನ್ನು ಪ್ರೇರೇಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತದಲ್ಲಿ ವಿವಿಧ ಧರ್ಮ, ಜಾತಿ, ಆಚಾರ ವಿಚಾರ, ಸಂಸ್ಕೃತಿಗಳಿವೆ. ಪ್ರತಿಯೊಬ್ಬರು ಸ್ವಾತಂತ್ರೃವಾಗಿ ಜೀವನ ಮಾಡಲು ಇರುವ ಏಕೈಕ ಭರವಸೆ ನಮ್ಮ ದೇಶದ ಪವಿತ್ರ ಗ್ರಂಥ ಸಂವಿಧಾನ. ಭಾರತದಲ್ಲಿ ಜೀವಿಸುವ ಪ್ರತಿಯೊಬ್ಬರೂ ಸಂವಿಧಾನವನ್ನು ಗೌರವಿಸಬೇಕು ಹಾಗೂ ಕಡ್ಡಾಯವಾಗಿ ಪಾಲಿಸಬೇಕು. ಈ ಸಂವಿಧಾನವನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವ ಮತ್ತು ಜಾರಿಗೆ ತರುವ ನ್ಯಾಯಾಂಗವು ಸರ್ವಶ್ರೇಷ್ಟವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ನಮ್ಮ ನ್ಯಾಯಾಂಗದ ಬಗ್ಗೆ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಮಂತ್ರಿಗಳು, ರಾಜ್ಯಪಾಲರು ಹೀಗೆ ಪ್ರತಿಯೊಬ್ಬ ಪ್ರಜೆಯು ಕೂಡ ಗೌರವಯುತವಾಗಿ ನಡೆದುಕೊಳ್ಳಬೇಕು. ಅಗೌರವದಿಂದ ನಡೆದುಕೊಂಡರೆ ಅದು ದೇಶದ್ರೋಹವಾಗುತ್ತದೆ. ಆದರೆ, ವಕೀಲ ರಾಕೇಶ್ ದೇಶದ್ರೋಹಿ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ವೇದಿಕೆಯ ಎಚ್.ಎನ್.ನರಸಿಂಹಮೂರ್ತಿ, ಎಲ್.ಸಂದೇಶ್, ತಾಳಶಾಸನ ಮೋಹನ್, ಎನ್.ದೊಡ್ಡಯ್ಯ, ಹುರುಗಲವಾಡಿ ರಾಮಯ್ಯ, ನಾರಾಯಣಸ್ವಾಮಿ, ಶ್ರೀಧರ್, ವೆಂಕಟಗಿರಿಯಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net