ಕೊಡಚಾದ್ರಿ ಪ್ರವೇಶ ನಿರ್ಬಂಧ ವಿರೋಧಿಸಿ ಪ್ರತಿಭಟನೆ

4hos1p kodchadri strike
ಕೊಡಚಾದ್ರಿ ಪ್ರವೇಶ ನಿರ್ಬಂಧ ವಿರೋಧಿಸಿ ಕಟ್ಟಿನಹೊಳೆಯಲ್ಲಿ ಕೊಡಚಾದ್ರಿ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಶಿವರಾಮ ಎನ್.ಶೆಟ್ಟಿ ಸಂಪದಮನೆ, ಗಣಪ ಗುರುಟೆ, ಪ್ರಭಾಕರ ನಿಟ್ಟೂರು, ಸಂತೋಷ ನಿಟ್ಟೂರು ಇತರರಿದ್ದರು.
Published on

ಹೊಸನಗರ: ಕೊಡಚಾದ್ರಿ ಗಿರಿ ಪ್ರವೇಶ ನಿರ್ಬಂಧ ವಿರೋಧಿಸಿ ಕಟ್ಟಿನಹೊಳೆಯಲ್ಲಿರುವ ವನ್ಯಜೀವಿ ಇಲಾಖೆಯ ಗೇಟ್ ಮುಂಭಾಗ ಕೊಡಚಾದ್ರಿ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಸ್ಥಳೀಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಮಿತಿ ಅಧ್ಯಕ್ಷ ಶಿವರಾಮ ಎನ್.ಶೆಟ್ಟಿ ಸಂಪದಮನೆ ಮಾತನಾಡಿ, ಕೊಡಚಾದ್ರಿ ಗಿರಿ ಅಸಂಖ್ಯಾತ ಭಕ್ತರ ಆರಾಧ್ಯ ತಾಣ. ಹರಕೆ ತೀರಿಸಲೆಂದೇ ಗಿರಿ ಏರುತ್ತಾರೆ. ಗಿರಿ ಪ್ರವೇಶ ನಿರ್ಬಂಧಿಸುವ ಮೂಲಕ ಧಾರ್ಮಿಕ ಯಾತ್ರೆಗೆ ಧಕ್ಕೆ ತರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಡಚಾದ್ರಿಯನ್ನು ಕೇವಲ ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ಗುರುತಿಸುವುದು ತಪ್ಪಾಗುತ್ತದೆ. ಕೊಡಚಾದ್ರಿ ಸನ್ನಿಧಿ ಕೊಲ್ಲೂರು ಮೂಕಾಂಬಿಕೆಯ ಮೂಲನೆಲೆ ಎಂಬ ನಂಬಿಕೆಯಿದೆ. ಶತಮಾನಕ್ಕಿಂತ ಹಿಂದಿನಿಂದಲೂ ಮೂಕಾಂಬಿಕೆ ಮಹಾತಾಯಿಯನ್ನು ನಂಬಿರುವ ಭಕ್ತರು ಹರಕೆ ಕಟ್ಟಿಕೊಂಡು, ಅದನ್ನು ತೀರಿಸಲೆಂದು ಆಗಮಿಸುತ್ತಾರೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ಭಾಗದಿಂದ ಪ್ರತಿದಿನ 500ಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಾರೆ. ಏಕಾಏಕಿ ಗಿರಿ ಪ್ರವೇಶ ನಿರ್ಬಂಧಿಸಿದರೆ ಅವರ ಧಾರ್ಮಿಕ ಆಶಯಕ್ಕೆ ಭಂಗ ಬರುತ್ತದೆ ಎಂದರು. ಯಾರದ್ದೋ ತಪ್ಪಿಗೆ ಇನ್ನೊಬ್ಬರ ಬದುಕಿನ ಮೇಲೆ ಪ್ರಹಾರ ಯಾವ ನ್ಯಾಯ. ಕೊಡಚಾದ್ರಿ ಪ್ರವೇಶ ನಿರ್ಬಂಧವನ್ನು ಕೂಡಲೇ ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದರು.
ವನ್ಯಜೀವಿ ಇಲಾಖೆ ಉಪವಲಯ ಅರಣ್ಯಾಧಿಕಾರಿ ರೂಪೇಶ್ ಚವ್ಹಾಣ್‌ಗೆ ಮನವಿ ಸಲ್ಲಿಸಲಾಯಿತು. ಮೇಲಿನ ಅಧಿಕಾರಿಗಳಿಗೆ ವರದಿ ನೀಡುವುದಾಗಿ ರೂಪೇಶ್ ಭರವಸೆ ನೀಡಿದರು. ಗಣಪ ಗುರುಟೆ, ಪ್ರಭಾಕರ ನಿಟ್ಟೂರು, ಸಂತೋಷ ನಿಟ್ಟೂರು, ಗ್ರಾಪಂ ಸದಸ್ಯರಾದ ಜಿ.ಕೆ.ಸತ್ಯನಾರಾಯಣ, ಶಿವರಾಮ ಕಟ್ಟಿನಹೊಳೆ, ರವೀಶ ಹಿರೇಮನೆ, ಪೊಲೀಸ್ ಇಲಾಖೆಯ ಶ್ರೀಪಾದ್, ವೆಂಕಟೇಶ್, ಪ್ರವೀಣ್ ಇತರರಿದ್ದರು.
ಪ್ರತಿಭಟನಾ ವೇಳೆ ಕೊಡಚಾದ್ರಿ ಇಡಿಸಿ ಕಮಿಟಿ ಅಧ್ಯಕ್ಷರು ಮತ್ತು ಸದಸ್ಯರು ಗೈರಾಗಿದ್ದು ಎದ್ದು ಕಾಣುತ್ತಿತ್ತು.

ಫಾಲ್ಸ್‌ಗೆ ಬೇಕಾದರೆ ಬ್ರೇಕ್ ಹಾಕಿ
ಅರಶಿಣಗುಂಡಿ ಫಾಲ್ಸ್ ದುರಂತ ಮರುಕಳಿಸಬಾರದು. ಕೊಡಚಾದ್ರಿ ತಪ್ಪಲಿನ ಹಿಡ್ಲುಮನೆ ಫಾಲ್ಸ್‌ಗೆ ಬೇಕಾದರೆ ವನ್ಯಜೀವಿ ಇಲಾಖೆ ತಮ್ಮ ವಿವೇಚನೆಯಂತೆ ಕ್ರಮಕೈಗೊಳ್ಳಲಿ. ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುವ ಆಟಾಟೋಪಗಳು ಕಂಡು ಬಂದಲ್ಲಿ ಅದಕ್ಕೆ ಬ್ರೇಕ್ ಹಾಕಲಿ. ಅದು ಬಿಟ್ಟು ದೇವರ ದರ್ಶನಕ್ಕೆ ಅವಕಾಶ ತಪ್ಪಿಸಿದರೇ ಹೇಗೆ ಎಂದು ಶಿವರಾಮ ಎನ್.ಶೆಟ್ಟಿ ಸಂಪದಮನೆ ಪ್ರಶ್ನಿಸಿದರು. ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗಿದೆ. ಈ ಬಗ್ಗೆ ತುರ್ತಾಗಿ ಸೂಕ್ತ ಕ್ರಮಕೈಗೊಂಡು ಧಾರ್ಮಿಕ ಯಾತ್ರಿಕರಿಗೆ ಗಿರಿ ಪ್ರವೇಶ ಅವಕಾಶ ನೀಡದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದು ಅನಿವಾರ್ಯ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net