ವೈದ್ಯರ ಮೇಲಿನ ಹತ್ಯೆ ಖಂಡಿಸಿ ಪ್ರತಿಭಟನೆ

oplus_0
oplus_0
Published on

ಚನ್ನರಾಯಪಟ್ಟಣ: ಕೋಲ್ಕತಾದಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಇದಕ್ಕೆ ಬೆಂಬಲವಾಗಿ ಚನ್ನರಾಯಪಟ್ಟಣದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತೆ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿ ಹೊರ ರೋಗಿಗಳ ಸೇವೆ ಸ್ಥಗಿತಗೊಳಿಸಿ, ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ವೈದ್ಯರ ಮುಷ್ಕರಕ್ಕೆ ಪಟ್ಟಣದ ಪ್ರಗತಿಪರ ಸಂಘಟನೆಗಳು ಕೈಜೋಡಿಸಿದ್ದವು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಭಿತ್ತಿಪತ್ರ ಹಿಡಿದು, ಕೋಲ್ಕತಾದಲ್ಲಿ ನಡೆದ ವೈದ್ಯೆಯ ಮೇಲಿನ ಅತ್ಯಾಚಾರ, ಹಲ್ಲೆ, ಕೊಲೆಯನ್ನು ಖಂಡಿಸಿದರು.


ಈ ವೇಳೆ ಮಾತನಾಡಿದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್, ಕೋಲ್ಕತಾದಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಅಮಾನುಷವಾದ ಘಟನೆ. ಭಾರತೀಯ ವೈದ್ಯಕೀಯ ಸಂಘ ಮತ್ತು ಸರ್ಕಾರಿ ವೈದ್ಯಕೀಯ ಸಂಘದ ಕರೆಯ ಮೇರೆಗೆ ಎಲ್ಲ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಸ್ಥಗಿತಗೊಳಿಸಲಾಗಿದೆ. ತುರ್ತು ಚಿಕಿತ್ಸೆಯಷ್ಟೆ ನೀಡಲಾಗುತ್ತಿದೆ. ಇದನ್ನು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.


ಪುರಸಭೆ ಸದಸ್ಯ ಸಿ.ಎನ್.ಶಶಿಧರ್, ಪರಿಸರ ಪ್ರೇಮಿ, ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚ.ನಾ.ಅಶೋಕ್, ಆರೋಗ್ಯ ಶೈಕ್ಷಣಿಕ ಅಧಿಕಾರಿ ಅನಿತಾ ಮಾತನಾಡಿದರು.

ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ಪತೆಯ ಎಲ್ಲ ವೈದ್ಯರು, ಲಯನ್ಸ್ ಕ್ಲಬ್‌ನ ಅಧ್ಯಕ್ಷ ಗಿರೀಶ್, ಖಜಾಂಚಿ ಡಿ.ಕೆ.ಮಂಜುನಾಥ್, ಸಮರಸೇನೆ ಜಿಲ್ಲಾಧ್ಯಕ್ಷ ಭರತ್‌ಗೌಡ, ತಾಲೂಕು ಅಧ್ಯಕ್ಷ ಸಂದೇಶ್‌ಗೌಡ, ಭೂಮಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ್, ಗೌ.ಅಧ್ಯಕ್ಷ ನಾಗರಾಜ್, ರಾಜಕುಮಾರ್, ಕಬ್ಬಾಳು ಮಹೇಶ್, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net