ಕಸ್ತೂರಿ ರಂಗನ್ ವರದಿ ವಿರುದ್ಧ ಐಡಿ ಪೀಠ ರಸ್ತೆಯಲ್ಲಿ ಪ್ರತಿಭಟನೆ

election boycott
Published on

ಚಿಕ್ಕಮಗಳೂರು: ಜನರ ಬದುಕಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ, ಹುಲಿಯೋಜನೆ, ಬಫರ್ ಜೋನ್ ಹಾಗೂ ಮುಳ್ಳಯ್ಯನ ಗಿರಿ ಸಂರಕ್ಷಿತ ಮೀಸಲು ಅರಣ್ಯ ಯೋಜನೆ ಕೈಬಿಡುವಂತೆ ಆಗ್ರಹಿಸಿ ಐ.ಡಿ.ಪೀಠ ಹಾಗೂ ಅತ್ತಿಗುಂಡಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಗ್ರಾಮದ ರಸ್ತೆಯಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ ಗ್ರಾಪಂ ಚುನಾವಣೆ ಬಹಿಷ್ಕರಿಸುವ ತೀರ್ಮಾನ ಕೈಗೊಂಡರು.

ಡಿ.15 ರಂದು ಪ್ರತಿಭಟನೆ
ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಮಲೆನಾಡಿನ ಜನಜೀವನದ ಉಳಿವಿಗಾಗಿ ಸರ್ಕಾರದ ಯೋಜನೆಗಳನ್ನು ಕೈಬಿಡುವಂತೆ ಒತ್ತಾಯಿಸಿ ಡಿ.15 ರಂದು ಬೆಳಗ್ಗೆ 11 ಗಂಟೆಗೆ ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಮಾರಕ ಯೋಜನೆಗಳನ್ನು ಕೈಬಿಡದಿದ್ದಲ್ಲಿ ಡಿ.22ರ ಐ.ಡಿ ಪೀಠ ಹಾಗೂ ಅತ್ತಿಗುಂಡಿ ವ್ಯಾಪ್ತಿಯ ಗ್ರಾಪಂಗಳಲ್ಲಿ ಚುನಾವಣೆ ನಡೆಯದಂತೆ ಎಲ್ಲ ಮತದಾರರು ಒಕ್ಕೊರಲಿನಿಂದ ಬಹಿಷ್ಕರಿಸಲು ನಿರ್ಣಯಿಸಲಾಗುವುದು ಎಂದರು.

ಬಹಿಷ್ಕಾರ ನಿರ್ಧಾರದಲ್ಲಿ ಒಗ್ಗಟ್ಟು
ಜಿಲ್ಲೆಯ ಜನಪ್ರತಿನಿಧಿಗಳು ಯೋಜನೆ ಕೈಬಿಡಲು ಒತ್ತಾಯಿಸಬೇಕು. ಕೆಸವಿನಮನೆ, ಮಹಲ್, ಪಂಡರವಳ್ಳಿ, ಸಂಪಿಗೆಕಟ್ಟೆ, ಹುಕ್ಕುಡ ಸೇರಿದಂತೆ ವಿವಿಧ ಗ್ರಾಮಗಳ ಎಲ್ಲ ಮತದಾರರು ಒಗ್ಗಟ್ಟಿನಿಂದ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಐ.ಡಿ.ಪೀಠ ವ್ಯಾಪ್ತಿಯಲ್ಲಿ ಇದುವರೆಗೆ ಸ್ಥಳೀಯ ಚುನಾವಣೆಗೆ ಯಾವುದೇ ಅಭ್ಯರ್ಥಿಗಳನ್ನು ನಿರ್ಣಯ ಮಾಡಿಲ್ಲ ಎಂದು ಹೇಳಿದರು.

ಸಾಮಾನ್ಯ ಜನರ ಬದುಕಿಗೆ ತೊಂದರೆ
ಐ.ಡಿ.ಪೀಠ ಗ್ರಾಮಸ್ಥ ಶಫೀಕ್ ಅಹಮ್ಮದ್ ಮಾತನಾಡಿ ಈ ಹಿಂದಿನಿಂದಲೂ ಈ ಭಾಗದಲ್ಲಿ ಪರಿಸರ ಸಂರಕ್ಷಣೆ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಇದೀಗ ಪರಿಸರ ಸಂರಕ್ಷಣೆ ಹೆಸರಲ್ಲಿ ಸಾಮಾನ್ಯ ಜನರ ಬದುಕಿಗೆ ತೊಂದರೆ ಉಂಟುಮಾಡಲಾಗುತ್ತಿದೆ. ಈ ಬಾರಿ ಗ್ರಾಪಂ ಚುನಾವಣೆ ಬಹಿಷ್ಕರಿಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಬಹಿಷ್ಕಾರದ ಅರಿವು ಮೂಡಿಸಲು ನಿರ್ಧಾರ
ಪತ್ತಿನ ಸಹಕಾರ ಸಂಘದ ಶಾಂತಕುಮಾರ್ ಮಾತನಾಡಿ, ಈಗಾಗಲೇ ಸರ್ವಪಕ್ಷಗಳ ನಾಯಕರ ಜತೆ ಯೋಜನೆಗಳ ಬಗ್ಗೆ ಚರ್ಚಿಸಲಾಗಿದ್ದು ಯೋಜನೆ ಜಾರಿಗೆ ಬರಲು ಬಿಡುವುದಿಲ್ಲ ಚುನಾವಣೆ ಬಹಿಷ್ಕರಿಸುವಂತೆ ಎಲ್ಲಾ ಗ್ರಾಮಸ್ಥರಿಗೂ ತಿಳುವಳಿಕೆ ಮೂಡಿಸಲಾಗುವುದು ಎಂದರು,

ಈ ಸಂದರ್ಭದಲ್ಲಿ ಅಜ್ಮಲ್ ಪಾಶಾ, ತೊಂಡವಳ್ಳಿ ಸುರೇಶ್, ಸದೀ, ಮನ್ನಾ, ರಾಜು, ಅಣ್ಣಪ್ಪ, ಹಾಗೂ ಕೆಸವಿನಮನೆ, ಮಹಲ್, ಪಂಡರವಳ್ಳಿ, ಸಂಪಿಗೆ ಕಟ್ಟೆ, ಹುಕ್ಕುಡ, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net