ಕೋವಿಡ್ ಲಸಿಕೆ ವರದಿ ಸುಟ್ಟು ಕೇರಳಿಗರಿಂದ ತಲಪಾಡಿ ಗಡಿಯಲ್ಲಿ ಪ್ರತಿಭಟನೆ

thalapady protest
Published on

ಕಾಸರಗೋಡು ಡೀಸಿ ಸ್ಥಳಕ್ಕೆ ಭೇಟಿ

ಮಂಗಳೂರು: ಕರೊನಾ ಹರಡುವ ಕಾರಣ ನೀಡಿ ಪ್ರವೇಶ ನಿರ್ಬಂಧಿಸಿರುವ ಕರ್ನಾಟಕ ಸರ್ಕಾರದ ಕ್ರಮದ ವಿರುದ್ಧ ಕೇರಳದ ವಿವಿಧ ಸಂಘಟನೆಗಳ ವತಿಯಿಂದ ಅಂತಾರಾಜ್ಯ ಗಡಿ ಪ್ರದೇಶ ತಲಪಾಡಿಯಲ್ಲಿ ಸೋಮವಾರ ಬೆಳಗ್ಗೆ ಬೃಹತ್ ಪ್ರತಿಭಟನೆ ನಡೆಯಿತು.
ಕಾಸರಗೋಡು ಜಿಲ್ಲಾಧಿಕಾರಿ ಸ್ವಾಗತ್ ಭಂಡಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಪ್ರತಿಭಟನಕಾರರ ಅಹವಾಲು ಸ್ವೀಕರಿಸಿದರು.
ಅಂತಾರಾಜ್ಯ ಪ್ರಯಾಣವನ್ನು ನಿರ್ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನ ಉಲ್ಲಂಘಿಸಿ ಕರ್ನಾಟಕ ಸರ್ಕಾರ ಗಡಿ ಬಂದ್ ನಡೆಸಿ ಉಭಯ ರಾಜ್ಯಗಳ ಗಡಿ ಪ್ರದೇಶದ ಜನರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ ಎಂದು ಪ್ರತಿಭಟನಕಾರರು ಕೋವಿಡ್ ಲಸಿಕೆ ವರದಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷಾದ್ ವರ್ಕಾಡಿ, ಹಿಂದೆ ಗಡಿ ಬಂದ್ ಸಂದರ್ಭ ನಾವು ಸಹಕರಿಸಿದ್ದೇವೆ. ಆದರೆ ಕೇಂದ್ರ ಸರ್ಕಾರವೇ ಎರಡು ಡೋಸ್ ವ್ಯಾಕ್ಸಿನ್ ಪಡೆದವರಿಗೆ ಅಂತಾರಾಜ್ಯ ಪ್ರಯಾಣ ನಿರ್ಬಂಧಿಸುವಂತಿಲ್ಲ ಎಂದು ಹೇಳಿದೆ. ಆದ್ದರಿಂದ ಎರಡು ಡೋಸ್ ವ್ಯಾಕ್ಸಿನ್ ಪಡೆದವರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದೆಯೇ ಕರ್ನಾಟಕ ಪ್ರವೇಶಕ್ಕೆ ಅವಕಾಶ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಿಪಿಐ ಕಾಸರಗೋಡು ಜಿಲ್ಲಾ ನಿರ್ವಾಹಕ ಸಮಿತಿ ಸದಸ್ಯ ಬಿ.ವಿ.ರಾಜನ್, ಮುಸ್ಲಿಂ ಲೀಗ್ ಮಂಜೇಶ್ವರ ಪಂಚಾಯಿತಿ ಸಮಿತಿ ಅಧ್ಯಕ್ಷ ಸೈಫುಲ್ಲ ತಂಙಳ್ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net