

ಮಂಡ್ಯ: ತಮಿಳು ಭಾಷೆಯಿಂದಲೇ ಕನ್ನಡ ಹುಟ್ಟಿಕೊಂಡಿದೆ ಎನ್ನುವ ನಟ ಕಮಲ್ ಹಾಸನ್ ಹೇಳಿಕೆ ಖಂಡಿಸಿ ನಗರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸಂಘಟನೆಗಳ ಕಾರ್ಯಕರ್ತರು, ಕಮಲ್ ಹಾಸನ್ ಭಾವಚಿತ್ರಕ್ಕೆ ಬೆಂಕಿ ಹಾಕಿ ಹಾಗೂ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡದ ಕಡು ವಿರೋಧಿ ಕಮಲ್ ಹಾಸನ್ ಚಲನಚಿತ್ರಗಳನ್ನು ರಾಜ್ಯದಲ್ಲಿ ಬಹಿಷ್ಕರಿಸಿಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ರವಾನಿಸಲಾಯಿತು.
ಕನ್ನಡ ವಿಶ್ವ ಲಿಪಿಗಳ ರಾಣಿ ಎಂಬ ಸತ್ಯ ಗೊತ್ತಿಲ್ಲದೆ ಅವಿವೇಕಿ ಕಮಲ್ ಹಾಸನ್, ನಮ್ಮ ಭಾಷೆಯ ಬಗ್ಗೆ ಮಾತನಾಡಿದ್ದಾರೆ. ಇಂತಹ ನಟನ ಚಲನಚಿತ್ರ ಬಹಿಷ್ಕರಿಸಿದರೆ ಇನ್ಯಾರೂ ಕನ್ನಡ ಭಾಷೆ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. ಈ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಹಿಂದೊಮ್ಮೆ ಕನ್ನಡ ವಿರೋಧಿ ಹೇಳಿಕೆ ನೀಡಿದಾಗ ಕನ್ನಡ ಪದ್ಮಭೂಷಣ ಡಾ.ರಾಜಕುಮಾರ ತ್ರೀವವಾಗಿ ವಿರೋಧಿಸಿದರು. ಆಗ ತಮಿಳುನಾಡಿನ ಬಹಿರಂಗ ಸಭೆಯಲ್ಲಿ ಡಾ.ರಾಜಕುಮಾರ ಅವರ ಮುಂದೆ ರಾಮಚಂದ್ರನ್ ಕ್ಷಮೆ ಕೋರಿದ್ದರು. ಡಾ.ರಾಜ್ ಅವರು ಕನ್ನಡಕ್ಕೆ ದೊಡ್ಡ ಶಕ್ತಿಯಾಗಿದ್ದರು. ಆದರೆ ಮೇರುನಟ ಡಾ.ಶಿವರಾಜಕುಮಾರ್ ಎದುರೇ ಕನ್ನಡ ಭಾಷೆ ಹುಟ್ಟಿರುವುದು ತಮಿಳುನಿಂದ ಎಂದು ಹೇಳಿದಾಗ ಖಂಡಿಸಿದೆ, ಮೌನ ವಹಿಸಿರುವುದು ಕನ್ನಡ ಭಾಷೆಗೆ ಘನಘೋರ ಅವಮಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವರೂ ಸೆರಿದಂತೆ ಕೆಲವು ಮಂತ್ರಿಗಳು ಕಮಲಹಾಸನ್ ಹೇಳಿಕೆ ಗಮನಿಸಲಿಲ್ಲ ಎಂದು ಹೇಳಿರುವುದು ನೋಡಿದರೆ ಕನ್ನಡ, ಕನ್ನಡಿಗರ ಬಗ್ಗೆ ಇವರಿಗೆ ಇರುವ ಕಾಳಜಿ ಎಂತಹದ್ದು ಎಂದು ತೋರಿಸುತ್ತದೆ. ಜತೆಗೆ ರಾಜಕಾರಣಿಗಳಿಗೆ ಭಾಷಾ ಜ್ಞಾನವೇ ಇಲ್ಲ ಎಂದು ಟೀಕಿಸಿದರು.
ಇನ್ನು ಜಗತ್ ಪ್ರಸಿದ್ಧ ಪಾರಂಪರಿಕ ಮೈಸೂರು ಸ್ಯಾಂಡಲ್ ಸೋಪ್ ಉತ್ಪನ್ನಗಳಿಗೆ ಪರಭಾಷೆ ನಟಿ ತಮನ್ನಾ ಭಾಟಿಯಾಗೆ 6.20 ಕೋಟಿ ರೂ ನೀಡಿ ರಾಯಭಾರಿಯಾಗಿ ನೇಮಕ ಮಾಡಿರುವುದು ಸರಿಯಲ್ಲ. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ತಮನ್ನಾ ಭಾಟಿಯಾ ಆಯ್ಕೆ ಬಗ್ಗೆ ಸಬೂಬು ಹೇಳುತ್ತಿದ್ದಾರೆ. ಇದು ಸರಿಯಲ್ಲ. ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಅಸ್ಮಿತೆಯನ್ನು ಉಳಿಸಲು ಸ್ವಾಭಿಮಾನಿ ಕನ್ನಡಿಗರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ದ್ರಾವಿಡ ಭಾಷೆಗಳಲ್ಲಿ ಅತಿ ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಕನ್ನಡ ಭಾಷೆ ಮತ್ತು ಕನ್ನಡಿಗರು ಎಂದು ಬೇಸರ ವ್ಯಕ್ತಪಡಿಸಿದರು.
ಈ ನಡುವೆ ನಿರಂತರವಾಗಿ ಕರ್ನಾಟಕಕ್ಕೆ ಬರುತ್ತಿರುವ ವಲಸಿಗರಿಗೆ ಯಾವುದೇ ನೀತಿ ನಿಯಮಗಳು ಕಾನೂನು ಮಿತಿ ಇಲ್ಲ. ಭಾರತದಲ್ಲಿ ಅತಿ ಹೆಚ್ಚು ವಲಸಿಗರಿಂದ ತುಂಬಿರುವ ರಾಜ್ಯ ಕರ್ನಾಟಕ. ಈ ವಲಸಿಗರು ಪ್ರತಿನಿತ್ಯ ಕನ್ನಡ ಭಾಷೆ ಮತ್ತು ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯ ಪುಂಡಾಟಿಕೆ ನಡೆಸುತ್ತಿದ್ದಾರೆ. ವಲಸಿಗರ ಅತಿಕ್ರಮ ಪ್ರವೇಶ ದೌರ್ಜನ್ಯ ಪುಂಡಾಟಿಕೆ ಬಗ್ಗೆ ರಾಜ್ಯಸರ್ಕಾರವೂ ಕೂಡ ಸಂಪೂರ್ಣ ನಿರ್ಲಕ್ಷೃ ವಹಿಸಿದೆ ಎಂದರು.
ಪ್ರತಿಭಟನೆಯಲ್ಲಿ ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ರಾಮನಗರ ಜಿಲ್ಲಾಧ್ಯಕ್ಷ ಉಮೇಶ್ ರಾಂಪುರ, ಮಂಡ್ಯ ಜಿಲ್ಲಾಧ್ಯಕ್ಷ ಜೋಸೆಫ್ ರಾಮು ಕೀಲಾರ, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಜಿಲ್ಲಾ ಸಂಚಾಲಕ ಸಲ್ಮಾನ್, ಆರಾಧ್ಯ ಗುಡಿಗೇನಹಳ್ಳಿ, ಭಾರತೀಯ ಕಿಸಾನ್ ಸಂಘ ಜಿಲ್ಲಾ ಪ್ರಮುಖ್ ಶಿವಣ್ಣ ಹೊಳಲು, ಎಲ್.ಜಯರಾಮ, ಮೋಹನ್ ಚಿಕ್ಕಮಂಡ್ಯ ಇತರರಿದ್ದರು.