ಜಮೀರ್ ಅಹ್ಮದ್ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆ

jds protest
Published on

ಮೈಸೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯನ್ನು ನಿಂದಿಸಿರುವ ವಸತಿ ಸಚಿವ ಜಮೀರ್ ಅಹ್ಮದ್ ಖಾನ್‌ರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ನಗರದ ಗಾಂಧಿವೃತ್ತದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಜೆಡಿಎಸ್ ಕಾರ್ಯಕರ್ತರು ಜಮೀರ್ ಅಹ್ಮದ್ ಖಾನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ತಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಕುಮಾರಸ್ವಾಮಿ ಬಳಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ಕಾರ್ಯಕರ್ತರು ಎಚ್ಚರಿಸಿದರು.

ನಗರಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಆಗಮಿಸಿರುವ ವಿಚಾರ ತಿಳಿದ ಜೆಡಿಎಸ್ ಕಾರ್ಯಕರ್ತರು, ಅವರು ಉಳಿದುಕೊಂಡಿದ್ದ ಹೋಟೆಲ್‌ಗೆ ಮುತ್ತಿಗೆ ಹಾಕುವ ನಿರ್ಧಾರ ಕೈಗೊಂಡರು. ಆದರೆ, ಅಷ್ಟರೊಳಗೆ ಮಾಧ್ಯಮದ ಮೂಲಕ ಜಮೀರ್ ಅಹ್ಮದ್ ಖಾನ್ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ಮುತ್ತಿಗೆ ನಿರ್ಧಾರ ಕೈಬಿಡಲಾಯಿತು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಜೆ. ದ್ವಾರಕೀಶ್, ನಗರಪಾಲಿಕೆ ಮಾಜಿ ಸದಸ್ಯರಾದ ಎಂ.ಎಸ್.ಶೋಭಾ, ಭಾಗ್ಯ ಮಾದೇಶ್, ಅಶ್ವಿನಿ ಅನಂತು, ಪ್ರೇಮಾ ಶಂಕರೇಗೌಡ, ಮಾಜಿ ಉಪ ಮೇಯರ್ ಕೃಷ್ಣ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ರಾಜ್ಯ ಕಾರ್ಯದರ್ಶಿ ಎಚ್.ಕೆ. ರಾಮು, ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ನಗರ ವಕ್ತಾರ ರಾಮು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net