

ರಾಯಚೂರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ ಸುಂಕ ಬೆದರಿಕೆಗಳು ಮತ್ತು ಕೇಂದ್ರ ಸರ್ಕಾರ ಸಹಿ ಮಾಡಿದ ಕಾರ್ಪೊರೇಟ್ ಪರ ಭಾರತ- ಯುಕೆ ಸಮಗ್ರ ಆರ್ಥಿಕ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಕ್ವಿಟ್ ಇಂಡಿಯಾ ಚಳುವಳಿ ನೆನಪಲ್ಲಿ ಸಂಯುಕ್ತ ಹೋರಾಟ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಮಹಾನಗರ ಪಾಲಿಕೆ ಬಳಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರ ಪ್ರತಿಕೃತಿ ಧಹನ ನಡೆಸಿ ಡಿಸಿ ಕಚೇರಿಯ ಗ್ರೇಡ್2 ತಹಸೀಲ್ದಾರ್ ಪರಶುರಾಮ್‌ಗೆ ಮನವಿ ಸಲ್ಲಿಸಿದರು.
ಮುಕ್ತ ವ್ಯಾಪಾರಕ್ಕೆ ಆಮೇರಿಕಾ ವಿಧಿಸಿರುವ ಶೇಕಡಾ 25 ರಷ್ಟು ಆಮದು ಸುಂಕ, ಬ್ರಿಟನ್ ಜತೆಗಿನ ಸಮಗ್ರ ಆರ್ಥಿಕ ಹಾಗೂ ವಾಣಿಜ್ಯ ಒಪ್ಪಂದ ಹೈನುಗಾರಿಕೆ, ತರಕಾರಿಗಳು ಮತ್ತು ಹಣ್ಣುಗಳು ಸೇರಿದಂತೆ ಸಂಸ್ಕರಿಸಿದ ಆಹಾರಗಳ ಅಮದನ್ನು ಹೆಚ್ಚಿಸುತ್ತದೆ. ಇದು ಭಾರತದಲ್ಲಿ ಆಹಾರ ಸಂಸ್ಕರಣೆಯಲ್ಲಿ ವಿದೇಶಿ ನೇರ ಹೂಡಿಕೆ ಹೆಚ್ಚಳಕ್ಕೆ ಕಾರಣವಾಗಿ ನಮ್ಮ ದೇಶದ ರೈತರ ಗಳಿಕೆ ಮತ್ತು ಸಣ್ಣ ಕೃಷಿ ವ್ಯಾಪಾರ ಸಂಸ್ಥೆಗಳ ಗಳಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ, ಏಕಪಕ್ಷೀಯವಾಗಿ ಆಮೇರಿಕಾ ಭಾರತದ ಮೇಲೆ ವಿಧಿಸಿರುವ ಸುಂಕದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಶೇ. 25 ರಷ್ಟು ಆಮದು ಸುಂಕವು ದೇಶದ ಸಾರ್ವಭೌಮತ್ವದ ಮೇಲಿನ ಗಂಭೀರ ಆಕ್ರಮಣವಾಗಿದೆ, ಇದನ್ನು ಕೇಂದ್ರ ಸರ್ಕಾರ ಪ್ರತಿಭಟಿಸಬೇಕಿದೆ, ದೇಶದ ಆಹಾರ ಭದ್ರತೆಗೆ ಗಂಭೀರವಾದ ಧಕ್ಕೆ ಉಂಟಾಗುತ್ತಿದ್ದು,ಎರಡೂ ನೀತಿಗಳು ಒಕ್ಕೂಟ ವ್ಯವಸ್ಥೆ ಮೇಲಿನ ಆಕ್ರಮಣವಾಗಿದೆ, ಕೃಷಿ ಕಾರ್ಪೋರೇಟೆಕರ ಸಾಧಿಸಲು ಅಗತ್ಯವಾದ ಹೆಚ್ಚಿನ ಅಧಿಕಾರವು ತನ್ನ ಮುಷ್ಟಿಯಲ್ಲಿ ಇರುವಂತೆ ಕೇಂದ್ರ ಸರ್ಕಾರ ಮಾಡಿಕೊಂಡಿರುವ ಹುನ್ನಾರವಾಗಿದೆ. ವಿದ್ಯುತ್ ಕ್ಷೇತ್ರದ ಖಾಸಗೀಕರಣ ಮಾಡಬಾರದು. ಕೃಷಿ ಪಂಪ್‌ಸೆಟ್ಗಳಿಗೆ ಗುಣಮಟ್ಟದ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು ಹಾಗೂ ಸ್ಮಾರ್ಟ್ ಮೀಟರ್ ಆಳವಡಿಕೆ ನಿಲ್ಲಬೇಕು. ಸ್ವಯಂ ವೆಚ್ಚ ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಕೆ.ಜಿ.ವಿರೇಶ, ಡಿ.ಎಸ್.ಶರಣಬಸವ, ಜಿಂದಪ್ಪ ವಡ್ಡರು, ಪ್ರಭಾಕರ ಪಾಟೀಲ್, ಬಸಲಿಂಗಪ್ಪ ಹೀರೆನಗನೂರು, ಬೂದಯ್ಯಸ್ವಾಮಿ ಗಟ್ಟೂರು, ರಂಗನಾಥ, ಅಸ್ಲಂಪಾಷ, ಅಂಜಿನೇಯ್ಯ ಕುರುಬ ದೊಡ್ಡಿ, ಮಲ್ಲನಗೌಡ, ಆನಂದ, ಮುದ್ದಕಪ್ಪ ನಾಯಕ, ಜಿಲಾನಿ ಪಾಷ, ಶ್ರೀ ನಿವಾಸ್ ಕಲವಲದೊಡ್ಡಿ, ಮಹೇಶ ಚೀಕಲಪರವಿ, ವೆಂಕಟಸ್ವಾಮಿ ಸೇರಿದಂತೆ ಅನೇಕರು ಇದ್ದರು.