

ಹುಬ್ಬಳ್ಳಿ: ಐಡಿಬಿಐ ಖಾಸಗೀಕರಣ ವಿರೋಧಿಸಿ ದೇಶಾದ್ಯಂತ ಕರೆ ನೀಡಿದ್ದರಿಂದ ಇಲ್ಲಿಯ ಗೋಕುಲ ರಸ್ತೆಯ ಕಾಟನ್ ಕೌಂಟಿ ಹೋಟೆಲ್‌ನಲ್ಲಿ ಸಭೆ ನಡೆಸಿದ ಬ್ಯಾಂಕ್ ಅಧಿಕಾರಿಗಳು, ಭಾನುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
2015ರಿಂದ ಕೇಂದ್ರ ಸರ್ಕಾರವು ಬ್ಯಾಂಕ್ ಖಾಸಗೀಕರಣಕ್ಕೆ ಮುಂದಾಗಿದೆ. 2024ರಲ್ಲಿ 5 ಸಾವಿರ ಕೋಟಿ ರೂ., 2025ರಲ್ಲಿ 7 ಸಾವಿರ ಕೋಟಿ ರೂ. ಆದಾಯವನ್ನು ತಂದುಕೊಟ್ಟಿದೆ. ಇಷ್ಟಿದ್ದರೂ ಖಾಸಗೀಕರಣಕ್ಕೆ ಮುಂದಾಗಿರುವುದು ಏಕೆ ? ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ ಅಧಿಕಾರಿಗಳ ಮುಂದಿನ ಭವಿಷ್ಯವೇನು? ಉದ್ಯೋಗ ಖಾತ್ರಿ ಹೊಣೆ ಯಾರು ಹೊರುತ್ತಾರೆ? ಹೊಸ ನೇಮಕಾತಿ ಇದುವರೆಗೂ ನಡೆದಿಲ್ಲ. ಕೂಡಲೇ ಈ ಖಾಸಗೀಕರಣ ನೀತಿ ಕೈಬಿಡಬೇಕು ಎಂದು ಆಗ್ರಹಿಸಿದರು. ಜು. 26ರಂದು ದೆಹಲಿಯ ಜಂತರ್‌ಮಂತರ್‌ನಲ್ಲಿ ಹೋರಾಟ ನಡೆಸಲಾಗುವುದು. ಆಗಸ್ಟ್ 11ರಂದು ದೇಶಾದ್ಯಂತ ಬಂದ್ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಖಿಲ ಭಾರತ ಐಡಿಬಿಐ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿಠ್ಠಲ ಕೋಟೇಶ್ವರರಾವ್, ಕರ್ನಾಟಕ ಜೋನಲ್ ಕಾರ್ಯದರ್ಶಿ ಜಿ. ಕೌಶಲ್ಯದೇವಿ, ಅಧ್ಯಕ್ಷ ಶರಣಗೌಡ ಬಿರಾದಾರ, ಪ್ರಮುಖರಾದ ಶುಭಾಂಗಿ, ಕೆ. ರವಿಕಾಂತ, ಎಂ. ಗೋವಿಂದ, ನವೀನ ನಿಚ್ಚಾಲ, ಪ್ರವೀಣ ಹಿತ್ತಲಮನಿ, ಎಸ್. ಗಿರೀಶ, ಕೆ. ಅಭಿಲಾಷ್ ಇತರರು ಇದ್ದರು.