

ಶ್ರೀರಂಗಪಟ್ಟಣ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ನಿರ್ಲಕ್ಷೃದಿಂದ ನೋಡುವ ಜತೆಗೆ ಅನುಚಿತ ವರ್ತಿಸಲಾಗುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಹಾಗೂ ಜನರು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಮುತ್ತಿಗೆ ಹಾಕಿದ ರೈತ ಸಂಘ, ದಲಿತ ಸಂಘಟನೆ ಹಾಗೂ ಕರವೇ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರೋಗಿಗಳ ಸಂಬಂಧಿಗಳು ಆಸ್ಪತ್ರೆ ಮುಂಭಾಗ ಕುಳಿತು ಪ್ರತಿಭಟನಾ ಧರಣಿ ನಡೆಸಿ ಘೋಷಣೆ ಕೂಗಿದರು.
ರೈತ ಸಂಘದ ಮುಖಂಡ ಮರಗಾಲ ಕೃಷ್ಣೇಗೌಡ ಮಾತನಾಡಿ, 100 ಹಾಸಿಗೆಗಳ ಸೌಲಭ್ಯವಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲವು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ರೋಗಿಗಳನ್ನು ದನಗಳಂತೆ ಏರುಧ್ವನಿಯಲ್ಲಿ ವಿಚಾರಿಸಿ ದೂರದಿಂದಲೇ ರೋಗಲಕ್ಷಣಗಳ ಕೇಳಿ ಯಾವುದೋ ಔಷಧ ಬರೆದು ಸಾಗು ಹಾಕುತ್ತಿದ್ದಾರೆ. ಅಲ್ಲದೆ ಕೆಲವು ಸಣ್ಣ-ಪುಟ್ಟ ಶಸ್ತ್ರಚಿಕಿತ್ಸೆ, ಪ್ರಯೋಗಾಲಯ ಸೇರಿದಂತೆ ಗರ್ಭಿಣಿಯರಿಗೆ ಸಾಮಾನ್ಯ ಹೆರಿಗೆ ಮಾಡಿಸುವ ಬದಲು ಸಿಜೆರಿಯನ್ ಮಾಡಿಸಲು ಒತ್ತಡ ಹಾಕಿ ಹಣಕ್ಕೆ ಬೇಡಿಕೆ ಇಡುವುದು, ಇಲ್ಲವಾದಲ್ಲಿ ಮೈಸೂರಿನ ದೊಡ್ಡ ಆಸ್ಪತ್ರೆಗೆ ಹೋಗು ಎಂದು ಗದರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರೈತ ಮುಖಂಡ ಪಾಂಡು ಮಾತನಾಡಿ, ಕೆಲವು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಗೆ ತಡವಾಗಿ ಆಗಮಿಸುವುದು, ಕೆಲಸದ ಸಮಯ ಮುಗಿಯುವ ಮುಂಚೆ ಹೊರಟು ಹೋಗುವುದು, ಕೆಲಸದ ಅವಧಿಯಲ್ಲಿ ತಮ್ಮ ಕಾರ್ಯಸ್ಥಾನದಲ್ಲಿರದೆ ರೋಗಿಗಳನ್ನು ಕಾಯಿಸುವ ಘಟನೆಗಳು ಸಾಕಷ್ಟು ಹೆಚ್ಚಿವೆ. ಈ ಬಗ್ಗೆ ಮೇಲಾಧಿಕಾರಿಗಳು ಲೋಪವೆಸಗುವ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದಸಂಸ ಮುಖಂಡ ಗಂಜಾಂ ರವಿಚಂದ್ರ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ನೀರಿನ ಸೌಲಭ್ಯ ಹಾಗೂ ಶುಚಿತ್ವವಿಲ್ಲ. ಶೌಚಗೃಹಗಳ ಬಾಗಿಲುಗಳು ಮುರಿದು ಅಧ್ವಾನಗೊಂಡಿವೆ. ಜತೆಗೆ ಕೆಲವು ವೈದ್ಯರು ಕಮಿಷನ್‌ಗಾಗಿ ಹೊರಗಿನ ಪ್ರಯೋಗಾಲಯಗಳಿಗೆ ರೋಗಿಗಳನ್ನು ಕಳುಹಿಸುವ ಜತೆಗೆ ಹೊರಗಿನ ಮೆಡಿಕಲ್ ಅಂಗಡಿಗಳಿಗೆ ಔಷಧಗಳನ್ನು ಬರೆಯುತ್ತಿದ್ದಾರೆ. ಈ ಅಕ್ರಮಗಳು ನಿಲ್ಲಬೇಕಿದ್ದು, ಸರ್ಕಾರಿ ಔಷಧಗಳನ್ನು ವಿತರಿಸಬೇಕು ಎಂದರು.
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾವಿಜಯಲಕ್ಷ್ಮಿ ಮಾತನಾಡಿ, ಇತ್ತೀಚೆಗೆ ನಾನು ಅಧಿಕಾರ ವಹಿಸಿಕೊಂಡಿದ್ದೇನೆ. ಜನರಿಂದ ಈಗ ಕೇಳಿಬಂದಿರುವ ಸಮಸ್ಯೆಗನ್ನು ತುರ್ತಾಗಿ ಪರಿಹರಿಸಲಾಗುವುದು. ಯಾವುದೇ ಚಿಕಿತ್ಸೆ ಅಥವಾ ಔಷಧಕ್ಕೆ ಹೊರಗೆ ಕಳುಹಿಸಲಾಗುವುದಿಲ್ಲ. ಜತೆಗೆ ಕೆಲಸದ ಸಮಯದಲ್ಲಿ ಕರ್ತವ್ಯಲೋಪವೆಸಗುವ ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿ ವಿರುದ್ಧ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ಕೈಬಿಟ್ಟರು.
ಕರವೇ ಅಧ್ಯಕ್ಷ ಚಂದಗಾಲು ಶಂಕರ್, ಕೆಂಪೇಗೌಡ ಯುವಶಕ್ತಿ ವೇದಿಕೆ ಅಧ್ಯಕ್ಷ ಮಹೇಶ್, ಸರ್ವೋದಯ ಪಕ್ಷದ ತಾಲೂಕು ಅಧ್ಯಕ್ಷ ಬಿ.ಎಸ್.ರಮೇಶ್, ರೈತ ಮುಖಂಡ ದೊಡ್ಡಪಾಳ್ಯ ಜಯರಾಮೇಗೌಡ, ಡಿ.ಎಂ.ಕೃಷ್ಣೇಗೌಡ ಇತರರು ಇದ್ದರು.