

ಮಂಡ್ಯ: ಕನ್ನಡ ನಾಡಿನ ಮೇಲೆ ಹಿಂದಿ ಭಾಷೆ ಹೇರಿಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಹಿಂದಿ ದಿವಸದಂದು ಹಿಂದಿ ಭಾಷೆಯ ತಿಥಿ ದಿವಸ ಎಂದು ಆಕ್ರೋಶಿಸಿ ಪ್ರತಿಭಟಿಸಿದರು.
ಅಂಚೆ ಕಚೇರಿ ಎದುರು ಜಮಾಯಿಸಿದ ವೇದಿಕೆ ಕಾರ್ಯಕರ್ತರು, ಹಿಂದಿ ಭಾಷೆ ತಿಥಿ ದಿವಸವಾಗಿದೆ ಮತ್ತೆ ಹುಟ್ಟಿ ಬರಲೇಬೇಡ ಎಂಬ ಬ್ಯಾನರ್ ಪ್ರದರ್ಶಿಸಿ ಕನ್ನಡಿಗರ ಮೇಲೆ ಒತ್ತಾಯ ಪೂರ್ವಕವಾಗಿ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್, ಅಂಚೆ ಹಾಗೂ ವಿಮಾ ಕಚೇರಿಗಳ ವ್ಯವಹಾರದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡದೆ ನಿರ್ಲಕ್ಷ್ಯ ತೋರಿ ಹಿಂದಿ ಭಾಷೆಯಲ್ಲಿ ವ್ಯವಹರಿಸುವ ಮೂಲಕ ಒತ್ತಾಯ ಪೂರ್ವಕವಾಗಿ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿನ ಬ್ಯಾಂಕ್ ಅಂಚೆ ಹಾಗೂ ವಿಮಾ ಕಚೇರಿ ಸೇರಿ ಸಾರ್ವಜನಿಕರೊಂದಿಗೆ ನಡೆಸುವ ಯಾವುದೇ ಪತ್ರ ವ್ಯವಹಾರ, ಅರ್ಜಿ, ಚಲನ್, ಡಿಜಿಟಲ್ ಬೋರ್ಡ್, ನಾಮಫಲಕ, ಎಟಿಎಂ ಯಂತ್ರ, ಘೋಷಣೆ, ಎಸ್‌ಎಂಎಸ್, ಸಾರ್ವಜನಿಕ ಪ್ರಕಟಣೆಗಳಲ್ಲಿ ಹಿಂದಿ ಭಾಷೆ ಬಳಕೆ ಮಾಡದೆ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಕನ್ನಡ ಭಾಷೆಯ ಅಸ್ತಿತ್ವಕ್ಕೆ ಮಾರಕವಾಗುವ ಹಿಂದಿ ದಿವಸ್ ಆಚರಣೆ ಮತ್ತು ಹಿಂದಿ ಕಲಿಕೆಗೆ ಪ್ರೋತ್ಸಾಹ ನೀಡುವ ಚಟುವಟಿಕೆಯನ್ನು ರಾಜ್ಯದಲ್ಲಿ ನಡೆಸಬಾರದು. ಜತೆಗೆ ಉದ್ಯೋಗ ಭರ್ತಿಗೆ ಪ್ರತ್ಯೇಕ ನಿಯಮ ರೂಪಿಸಿ ಲಿಖಿತ ಪರೀಕ್ಷೆಗಳಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಕನ್ನಡಿಗರು ಕಟ್ಟಿ ಬೆಳೆಸಿರುವ ಬ್ಯಾಂಕ್‌ಗಳನ್ನ ಉತ್ತರ ಭಾರತದ ಬ್ಯಾಂಕ್‌ಗಳ ಜತೆ ವಿಲೀನ ಪ್ರಕ್ರಿಯೆ ಸ್ಥಗಿತ ಮಾಡಬೇಕು. ಸ್ಟೇಟ್ ಬ್ಯಾಂಕ್ ಆ್ ಮೈಸೂರು, ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್‌ಗಳ ವಿಲೀನ ರದ್ದುಪಡಿಸಿ ಕನ್ನಡಿಗರಿಗೆ ಮರಳಿಸಬೇಕು.ಬ್ಯಾಂಕ್, ಅಂಚೆ, ವಿಮಾ ಸಂಸ್ಥೆಗಳು ಕನ್ನಡ ಭಾಷೆಯಲ್ಲಿ ವ್ಯವಹರಿಸುತ್ತೇವೆ, ಹಿಂದಿ ಭಾಷೆಯನ್ನು ಹೇರಿಕೆ ಮಾಡುವುದಿಲ್ಲ ಎಂದು ಬಹಿರಂಗ ಪ್ರಕಟಣೆ ಮಾಡಲು ಮುಖ್ಯಮಂತ್ರಿ ಆದೇಶಿಸಬೇಕು. ಕನ್ನಡಿಗರ ಬೇಡಿಕೆಗಳ ಬಗ್ಗೆ ಚರ್ಚಿಸಲು ಬ್ಯಾಂಕ್, ಅಂಚೆ, ವಿಮಾ ಕಚೇರಿಗಳ ಮುಖ್ಯಸ್ಥರು, ಕನ್ನಡಪರ ಸಂಘಟನೆಗಳು, ಜನಪರ ಹೋರಾಟಗಾರರ ಸಭೆ ಕರೆದು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ, ಜೋಸ್ೆ, ಶಿವರಾಮು, ಮುದ್ದೇಗೌಡ, ಸುಕುಮಾರ್, ಕೃಷ್ಣೇಗೌಡ ಇತರರಿದ್ದರು.