

ಶಿರಸಿ: ರಾಜ್ಯ ಸರ್ಕಾರ ರೈತರ ಕೃಷಿ ಪಂಪ್ಸೆಟ್ ಸಂಖ್ಯೆಗೆ ರೈತರ ಆಧಾರ ಕಾರ್ಡ್ ಜೋಡಣೆ ಮಾಡುತ್ತಿದೆ. ಭವಿಷ್ಯದಲ್ಲಿ ರೈತರಿಗೆ ನೀಡುತ್ತಿರುವ ಉಚಿತ ವಿದ್ಯುತ್ ಸೇವೆಗೆ ಈ ಪ್ರಕ್ರಿಯೆ ಧಕ್ಕೆಯಾಗುವ ಸಾಧ್ಯತೆ ಇದೆ. ಇದನ್ನು ಖಂಡಿಸಿ ಸೆ. 4ರಂದು ನಗರದ ಹೆಸ್ಕಾಂ ಕಚೇರಿಯೆದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯದರ್ಶಿ ರಾಘವೇಂದ್ರನಾಯ್ಕ ಕಿರವತ್ತಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ವೈಜ್ಞಾನಿಕ ಬೆಲೆ ಸಿಗುವವರೆಗೂ ಸರ್ಕಾರ ಮೂಲಸೌಕರ್ಯ ನೀಡಬೇಕು. ಆಧಾರ ಕಾರ್ಡ್ ಜೋಡಣೆಯನ್ನು ಹೆಸ್ಕಾಂ ತಕ್ಷಣ ಸ್ಥಗಿತಗೊಳಿಸದಿದ್ದರೆ ರೈತರೆಲ್ಲ ಪಂಪ್ ಸೆಟ್ಗಳ ಮೀಟರನ್ನು ಕಿತ್ತುಕೊಂಡು ಬಂದು ರಸ್ತೆಗೆ ಎಸೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಡಕೆಗೆ ಕೊಳೆ ರೋಗ ಬಂದು ಹಾನಿ ಆಗಿದೆ. ಸರ್ಕಾರ ಅಡಕೆಗೆ ಸಂಪೂರ್ಣ ವಿಮೆ ಒದಗಿಸಿ, ಪ್ಯಾಕೇಜ್ ಘೊಷಣೆ ಮಾಡಬೇಕು. ಭತ್ತ ಹೊರತುಪಡಿಸಿ ಎಲ್ಲ ಬೆಳೆ ಹಾನಿಯಾಗಿದೆ. ಗೋವಿನ ಜೋಳ ಹುಟ್ಟಿಯೇ ಇಲ್ಲ. ರೈತರು ತೆರಿಗೆಯನ್ನು ಪರೋಕ್ಷವಾಗಿ ತುಂಬುತ್ತಿದ್ದರೂ ರೈತರಿಗೆ ಮಾತ್ರ ಸೌಲಭ್ಯ ಒದಗಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆಕ್ಷೇಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಭಟ್ಕಳ ಹೊರತುಪಡಿಸಿ ಜಿಲ್ಲೆಯ ಉಳಿದ ತಾಲೂಕು ಮರೆತಿದ್ದಾರೆ. ಬರಗಾಲದಲ್ಲಿ ಸಭೆ ಮಾಡಿಲ್ಲ, ರೈತರ ಸಮಸ್ಯೆ ಆಲಿಸಿಲ್ಲ. ಅವರು ತಮ್ಮ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಯೋಗ್ಯರಿಗೆ ಅವಕಾಶ ಮಾಡಿಕೊಡಲಿ.
ಪ್ರಮುಖರಾದ ಪ್ರಮೋದ ಜಕಲಣ್ಣನವರ್, ರವೀಂದ್ರ ನಾಯ್ಕ, ಮೋಹನ ದೊಡ್ಮನಿ, ಶಶಿಕುಮಾರ, ನಾಗರಾಜ ಡಾಂಗೆ ಇತರರಿದ್ದರು.