ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ,  ನವನಗರದ ಹೆಸ್ಕಾಂ ಕಚೇರಿಗೆ ಮುತ್ತಿಗೆ, ಸಮರ್ಪಕ ವಿದ್ಯುತ್ ಕೊಡದ್ದಕ್ಕೆ ಆಕ್ರೋಶ

IMG-20250328-WA0006-1.jpg
Published on

ಹುಬ್ಬಳ್ಳಿ: ಬಜೆಟ್ ನಲ್ಲಿ ಧಾರವಾಡ ಜಿಲ್ಲೆ ಕಡೆಗಣನೆ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ರೈತರು ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಇಲ್ಲಿಯ ನವನಗರದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ಸಾವಿರಾರು ರೈತರು, ಸಾರ್ವಜನಿಕರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಬೇಸಿಗೆಯಲ್ಲಿ ಬೆಳೆ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ರೈತರ ಅನುಕೂಲಕ್ಕಾಗಿ ಕೂಡಲೇ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು, ಸಕಾಲಕ್ಕೆ ವಿದ್ಯುತ್ ಪರಿವರ್ತಕ (ಟಿಸಿ) ಬದಲಾಯಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಧಾರವಾಡ ಜಿಲ್ಲೆಯ ಕಲಘಟಗಿ, ಅಳ್ನಾವರ, ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಹಾಗೂ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ರೈತರು, ಬಿಜೆಪಿ ಮುಖಂಡರು ಎಪಿಎಂಸಿ ಆವರಣದಲ್ಲಿ ಸೇರಿ ಹೆಸ್ಕಾಂ ಕಚೇರಿ ವರೆಗೆ ಮೆರವಣಿಗೆ ನಡೆಸಿದರು.

ಎತ್ತು ಚಕ್ಕಡಿ, ಟ್ರಾಕ್ಟರ್ ಗಳೊಂದಿಗೆ ಆಗಮಿಸಿದ ರೈತರು ಫಲಕಗಳನ್ನು ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಹೆಸ್ಕಾಂ ಕಚೇರಿಗೆ ಆಗಮಿಸಿ ಬಾಗಿಲ ಬಳಿ ಪ್ರತಿಭಟನೆ ನಡೆಸಿದರು.

ಲಾಡ್ ವಿರುದ್ಧ ಅಸಮಾಧಾನ:
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಎಂಎಲ್ಸಿ ನಾಗರಾಜ ಛಬ್ಬಿ, ಗುಣಮಟ್ಟದ ವಿದ್ಯುತ್ ಇಲ್ಲದೇ ಕಲಟಗಿ ಕ್ಷೇತ್ರದ ಜನರು ಸಂಕಷ್ಟದಲ್ಲಿದ್ದಾರೆ. ಹೆಸ್ಕಾಂನವರು ಟಿಸಿ ಕೇಳಿದರೆ ಮೂರು ತಿಂಗಳು ಕಾಯುವ ಶಿಕ್ಷೆ ಕೊಡುತ್ತಾರೆ. ಇಂತಹ ಯಾವುದೇ ಸಮಸ್ಯೆಗಳು ಸಚಿವ ಸಂತೋಷ್ ಲಾಡ್ ಅವರಿಗೆ ಕಾಣುತ್ತಿಲ್ಲ. ಇತ್ತೀಚೆಗೆ ಅವರು ಕ್ಷೇತ್ರಕ್ಕೆ ಬರುವುದನ್ನೇ ಮರೆತಿದ್ದಾರೆ ಎಂದು ದೂರಿದರು.

ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಹೊಲ, ಮನೆ ಕೆಲಸ ಬಿಟ್ಟು ರೈತರು ಅನಿವಾರ್ಯವಾಗಿ ಪ್ರತಿಭಟನೆಗೆ ಬಂದಿದ್ದಾರೆ. ಸರ್ಕಾರಕ್ಕೆ ಅಗತ್ಯ ಸೌಕರ್ಯಗಳಲ್ಲಿ ಒಂದಾದ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ವಿದ್ಯುತ್ ಹಾಹಾಕಾರ ಉಂಟಾಗಿದೆ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ರೈತ ಬೆಳೆ ಬೆಳೆಯಲು ನೀರು ಬೇಕಾಗಿದೆ. ಆದರೆ, ಸರ್ಕಾರವು ಎಲ್ಲವನ್ನೂ ಕಡೆಗಣನೆ ಮಾಡುತ್ತಿದೆ. ಜನರು ಬೇಸತ್ತು ಕಾನೂನು ಕೈಗೆ ತೆಗೆದುಕೊಳ್ಳುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದರು.

ಮುಖಂಡ ಐ.ಸಿ. ಗೋಕುಲ ಮಾತನಾಡಿ, ಅಳ್ನಾವರ ಕಲಘಟಗಿ ಭಾಗದಲ್ಲಿ ವಿದ್ಯುತ್ ಅಭಾವ ಬಹಳಷ್ಟಿದೆ. ಅಧಿಕಾರಿಗಳಿಗೆ ಮೌಖಿಕವಾಗಿ ಎಷ್ಟು ಬಾರಿ ಹೇಳಿದರೂ ಸ್ಪಂದನೆ ಸಿಕ್ಕಿಲ್ಲ. ಟಿಸಿ ಇಲ್ಲದೇ ರೈತರ ಜಮೀನಿಗೆ ನೀರು ಹರಿಯುತ್ತಿಲ್ಲ. ಕೆಲವೊಮ್ಮೆ ಎರಡು ದಿನಗಟ್ಟಲೇ ಕರೆಂಟ್ ಕೈಕೊಡುತ್ತದೆ. ಕೇಳಿದರೆ ಲೈನ್ಮನ್ ಇಲ್ಲ ಎನ್ನುತ್ತಾರೆ ಎಂದು ಆಕ್ರೋಶಗೊಂಡರು.

ಬಿಜೆಪಿ ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಮಾತನಾಡಿದರು.
ಸುಮಾರು ಎರಡು ತಾಸು ಹೆಸ್ಕಾಂ ಎದುರು ಪ್ರತಿಭಟನೆ ನಡೆಯಿತು. ನಂತರ ಅಧಿಕಾರಿಗಳಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.

ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ, ಶಿವಾನಂದ ನಾರಾಯಣಪುರ, ಚಂಬಣ್ಣ ಲದ್ದಿ, ವಿವಿಧ ತಾಲೂಕಿನ ರೈತರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net