ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ವಿರೋಧಿಸಿ ಪ್ರತಿಭಟನೆ

SDP STRIKE
Published on

ಸಿದ್ದಾಪುರ: ತಾಲೂಕು ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಹಾಗೂ ಅಗತ್ಯ ಯಂತ್ರೋಪಕರಣ ಅಳವಡಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಬುಧವಾರ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಆಸ್ಪತ್ರೆಯಲ್ಲಿನ ಮಕ್ಕಳ ತಜ್ಞರು, ಹೆರಿಗೆ ತಜ್ಞರು, ನರ್ಸ್‌ಗಳ ನಿರ್ಲಕ್ಷೃದಿಂದ ಬಡ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಮಕ್ಕಳ ತಜ್ಞರು ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸದೆ ತಮ್ಮ ಖಾಸಗಿ ಕ್ಲಿನಿಕ್‌ಗೆ ಬರಲು ಹೇಳುತ್ತಾರೆ. ಅದೇ ರೀತಿ ಹೆರಿಗೆ ತಜ್ಞರು ಕೂಡ ಸಹಜ ಹಾಗೂ ಶಸ್ತ್ರಚಿಕಿತ್ಸೆ (ಸಿಜೇರಿಯನ್) ಹೆರಿಗೆಗೆ ದರ ನಿಗದಿ ಮಾಡಿ ಲಂಚ ಪಡೆಯುತ್ತಾರೆ ಎಂದು ಆರೋಪಿಸಿದರು.

ಇತ್ತೀಚೆಗೆ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷೃದಿಂದ ಬಾಣಂತಿಯೊಬ್ಬರು ಮೃತಪಟ್ಟಿದ್ದು, ಮಕ್ಕಳು ತಬ್ಬಲಿಗಳಾಗಿದ್ದಾರೆ. ಕೂಡಲೇ ಇಂತಹ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಕ್ಯಾನಿಂಗ್‌ಗೆ ಸಾಗರಕ್ಕೆ ಕಳುಹಿಸುತ್ತಾರೆ. ಹೀಗಾಗಿ ಸ್ಕ್ಯಾನಿಂಗ್ ಯಂತ್ರ ಅಳವಡಿಸಬೇಕು ಎಂದು ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪ್ರಕಾಶ್ ಪುರಾಣಿಕ ಪ್ರತಿಕ್ರಿಯಿಸಿ, ಒಂದು ವಾರದೊಳಗೆ ಆಸ್ಪತ್ರೆ ಸಿಬ್ಬಂದಿ ವ್ಯವಸ್ಥೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.

ಗ್ರೇಡ್-2 ತಹಸೀಲ್ದಾರ್ ಶಾಮ್‌ಸುಂದರ್ ಮಾತನಾಡಿ, ಆಸ್ಪತ್ರೆಗೆ ಬೇಕಾಗಿರುವ ಉಪಕರಣಗಳ ಬಗ್ಗೆ ಶಾಸಕರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಸಾಮಾಜಿಕ ಹೋರಾಟಗಾರ ಅಣ್ಣಪ್ಪ ನಾಯ್ಕ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಕೃಷ್ಣಮೂರ್ತಿ ಐಸೂರ್, ದಯಾನಂದ ಕಡಕೇರಿ, ಸಂತೋಷ, ವೆಂಕಟೇಶ್ ನಾಯ್ಕ, ದೀಪಾ ನಾಯ್ಕ, ಶೋಭಾ ನಾಯ್ಕ, ದಿನೇಶ್ ಐಸೂರ್, ವಿವೇಕ್ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net