ಹಲ್ಲಿ ಬಿದ್ದ ಊಟ ನೀಡಿದ್ದನ್ನು ಖಂಡಿಸಿ ಪ್ರತಿಭಟನೆ

Published on

ಮೈಸೂರು: ಹಲ್ಲಿ ಬಿದ್ದ ಊಟ ನೀಡಿದ್ದನ್ನು ಖಂಡಿಸಿ ಮೈಸೂರು ವಿಶ್ವ ವಿದ್ಯಾನಿಲಯದ ಗೌತಮ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಮಾನಸಗಂಗೋತ್ರಿಯ ಪ್ರವೇಶ ದ್ವಾರದಲ್ಲಿರುವ ಕುವೆಂಪು ಪ್ರತಿಮೆ ಮುಂಭಾಗದಲ್ಲಿ ಶನಿವಾರ ಪ್ರತಿಭಟಿಸಿದರು.
ಹಲ್ಲಿ ಬಿದ್ದಿರುವ ಊಟವನ್ನೇ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇವಿಸಿದ್ದಾರೆ. ಶುಚಿತ್ವ ಇಲ್ಲದ ಕಾರಣ ಈ ರೀತಿಯ ಸಮಸ್ಯೆಗಳಾಗುತ್ತಿವೆ. ಈ ಬಗ್ಗೆ ಮೈಸೂರು ವಿಶ್ವವಿದ್ಯಾನಿಲಯದ ಅಧಿಕಾರಿಗಳಿಗೆ ಪರಿಸ್ಥಿತಿ ಕುರಿತು ಅನೇಕ ಬಾರಿ ಮನದಟ್ಟು ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ವಿದ್ಯಾಭ್ಯಾಸ ಮಾಡಲು ದೂರದ ಊರುಗಳಿಂದ ಬಂದಿರುವ ವಿದ್ಯಾರ್ಥಿಗಳಿಗೆ ಸರಿಯಾದ ಊಟ ಇಲ್ಲದೇ ತೊಂದರೆ ಆಗುತ್ತಿದೆ. ಇದನ್ನು ಮನವರಿಕೆ ಮಾಡಲು ಈ ಹಿಂದೆ ಇಡೀ ರಾತ್ರಿ ಪ್ರತಿಭಟನೆ ನಡೆಸಿದ್ದೇವೆ. ಆದರೂ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ಕಿ ಸರಬರಾಜಿಗೆ ಟೆಂಡರ್ ನೀಡಿದ್ದು, ಗುಣಮಟ್ಟದ ಅಕ್ಕಿ ಪೂರೈಸುತ್ತಿಲ್ಲ. ಇದರಿಂದ ಊಟವೂ ಚೆನ್ನಾಗಿರುವುದಿಲ್ಲ. ಅದನ್ನು ಸೇವಿಸಲೂ ಕಷ್ಟವಾಗುತ್ತದೆ. ಸರಿಯಾಗಿ ಆಹಾರ ನೀಡದಿರುವುದರಿಂದ ಆರೋಗ್ಯ ಸಮಸ್ಯೆಗಳಾಗುತ್ತಿವೆ. ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ. ಹೀಗಾಗಿ, ಸಂಬಂಧಪಟ್ಟವರು ಉತ್ತಮ ಆಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿ ವಿದ್ಯಾರ್ಥಿ ಕ್ಷೇಮಪಾಲ ಪ್ರೊ.ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು.
ದಲಿತ ವಿದ್ಯಾರ್ಥಿ ಒಕ್ಕೂಟದ ಮುಖಂಡರಾದ ಸಚಿನ್, ಗಿರೀಶ್, ನವೀನ್, ಭರತ್, ರೋಹಿತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net