ಸೆ.11ರಂದು ಪೂರ್ಣಾವಧಿ ತೆರಿಗೆ ವಿರೋಧಿಸಿ ಪ್ರತಿಭಟನೆ

9sgr2
ಸಾಗರದಲ್ಲಿ ಲಘು ಸಾರಿಗೆ ವಾಹನ ಚಾಲಕರು ಮತ್ತು ಮಾಲೀಕರ ಸಂಘದಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಐ.ವಿ.ಹೆಗಡೆ ಮಾತನಾಡಿದರು. ಚಂದ್ರಶೇಖರ್, ಮರಿಯಪ್ಪ, ಮಂಜುನಾಥ್, ಕಿರಣ್ ಕುಮಾರ್, ಅಶೋಕ್, ಶಂಕರ್, ಸುಧೀರ್ ಶೆಟ್ಟಿ, ಸಿ.ಆರ್.ಗೋಪಾಲ, ಎಂ.ಟಿ.ಮಂಜುನಾಥ್ ಇತರರಿದ್ದರು.
Published on

ಸಾಗರ: ಹೊಸದಾಗಿ ಜಾರಿಗೆ ತಂದಿರುವ ಅವೈಜ್ಞಾನಿಕ ತೆರಿಗೆ ಪದ್ಧತಿ ಕೈಬಿಡುವಂತೆ ಒತ್ತಾಯಿಸಿ ಸೆ.11ರಂದು ಲಘು ಸಾರಿಗೆ ವಾಹನ ಚಾಲಕರು ಮತ್ತು ಮಾಲೀಕರ ಸಂಘದಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಮುಖ ಐ.ವಿ.ಹೆಗಡೆ ತಿಳಿಸಿದರು.

ಬೆಳಗ್ಗೆ ಆರ್‌ಟಿಒ ಕಚೇರಿಯಿಂದ ವಾಹನಗಳ ಮೆರವಣಿಗೆ ಹೊರಟು ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಜತೆಗೆ ಶಾಸಕರಿಗೂ ಮನವಿ ಪತ್ರ ಸಲ್ಲಿಸಲಾಗುವುದು. ರಾಜ್ಯದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ನಮ್ಮ ಸಂಘ ಬೆಂಬಲ ಸೂಚಿಸುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರ್ಕಾರ ಬೇರೆ ಬೇರೆ ಭಾಗ್ಯಗಳಿಗೆ ಆರ್ಥಿಕ ಸಂಪನ್ಮೂಲ ಹೊಂದಿಸಲು ನಮ್ಮಂತಹ ಸಣ್ಣ-ಪುಟ್ಟ ಶ್ರಮಿಕ ವರ್ಗದ ಬದುಕಿನ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಲಘು ವಾಹನಗಳಿಗೆ ಪೂರ್ಣಾವಧಿ ತೆರಿಗೆ ವಿಧಿಸಿದ್ದರಿಂದ ಅದು ಸಣ್ಣ ಪುಟ್ಟ ವಾಹನ ಮಾಲೀಕರಿಗೆ ಹೊರೆಯಾಗುತ್ತಿದೆ. ವಾಹನ ಓಡಿಸಲು ಸಾಧ್ಯವಾಗದೆ ಇರುವುದರಿಂದ ಇದನ್ನು ಅವಲಂಬಿಸಿರುವ ಚಾಲಕರು, ಹಮಾಲರ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತಿದೆ. ಐದು ವರ್ಷದ ಹಿಂದೆ ಇದೇ ರೀತಿ ತೆರಿಗೆ ಹೆಚ್ಚಳ ಮಾಡಲಾಗಿತ್ತು. ಆಗ ಸಂಘದ ಮನವಿ ಮೇರೆಗೆ ಹಂತ ಹಂತವಾಗಿ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈಗಿನ ಸರ್ಕಾರ ಏಕಾಏಕಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪೂರ್ಣಾವಧಿ ತೆರಿಗೆ ವಿಧಿಸಿದೆ ಎಂದು ದೂರಿದರು.
ಭೂ ಸಾರಿಗೆ ಮೂಲಕ ದೇಶದ ಆರ್ಥಿಕತೆಗೆ ನಮ್ಮದೆ ಕೊಡುಗೆ ನೀಡುತ್ತಿದ್ದೇವೆ. ವರ್ಷಕ್ಕೆ ಲಘು ವಾಹನ ಇರಿಸಿಕೊಂಡವರು ಕನಿಷ್ಠ 1.50 ಲಕ್ಷ ರೂ. ತೆರಿಗೆ ಕಟ್ಟಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಹಿಂದಿನ ತೆರಿಗೆ ಪದ್ಧತಿಯನ್ನೇ ಮುಂದುವರೆಸಬೇಕು. ಹೊಸ ತೆರಿಗೆ ಪದ್ಧತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಚಂದ್ರಶೇಖರ್, ಮರಿಯಪ್ಪ, ಮಂಜುನಾಥ್, ಕಿರಣ್ ಕುಮಾರ್, ಅಶೋಕ್, ಶಂಕರ್, ಸುಧೀರ್ ಶೆಟ್ಟಿ, ಸಿ.ಆರ್.ಗೋಪಾಲ, ಎಂ.ಟಿ.ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net