

ಬೇಲೂರು: ತಾಲೂಕಿನ ಶಿವಪುರ ಕಾವಲಿನ ದೇವರಹಳ್ಳಿ ಸಮೀಪ ಅರಣ್ಯ ಇಲಾಖೆ ಸಿಬ್ಬಂದಿ ಕಂದಾಯ ಜಮೀನಿನಲ್ಲಿ ಟ್ರಂಚ್(ಚರಂಡಿ)ತೆಗೆದು ಜಮೀನು ವಶಕ್ಕೆ ಮುಂದಾಗಿದ್ದು, ನಮ್ಮ ಹಕ್ಕಿನ ಜಮೀನಿನಲ್ಲಿ ಮಾಹಿತಿ ನೀಡದೆ ಟ್ರಂಚ್ ತೆಗೆಯುತ್ತಿರುವುದು ಸರಿಯಲ್ಲ ಎಂದು ಆರೋಪಿಸಿ ಭಾನುವಾರ ರೈತರು ಪ್ರತಿಭಟನೆ ನಡೆಸಿದರು.
70 ವರ್ಷದ ಹಿಂದೆಯೇ ನಮಗೆ ಜಮೀನು ಮಂಜೂರಾಗಿದೆ. ನಮ್ಮ ಜಮೀನಿಗೆ ಪಹಣಿ ಸಹ ಬರುತ್ತಿದೆ. ಹಕ್ಕುಪತ್ರ, ಸಾಗುವಳಿ ಚೀಟಿ ದೊರಕಿದ್ದು, ನಮ್ಮ ಹೆಸರಿಗೆ ಖಾತೆ ಆಗಿದೆ. ಆದರೂ ಅರಣ್ಯ ಇಲಾಖೆ ಸಿಬ್ಬಂದಿ ನಮ್ಮ ಜಮೀನಿನ ಸುತ್ತ ಭಾನುವಾರ ಚರಂಡಿ ತೆಗೆಯುವ ಕೆಲಸ ಆರಂಭಿಸಿದ್ದಾರೆ. ನಮಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಹೀಗೆ ಮುಂದಾಗಿರುವುದು ಸರಿಯಲ್ಲ. ನಮ್ಮ ಜಮೀನಿನ ದಾಖಲೆಗಳಿಗೆ ಬ್ಯಾಂಕಿನಲ್ಲಿ ಸಾಲ ದೊರಕುತ್ತಿದೆ. ಕೃಷಿಗೆ ಸಂಬಂಧಿಸಿದ ಎಲ್ಲ ಅನುಕೂಲಗಳಿದ್ದರೂ, ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂದು ವಾದಿಸುವುದು ಎಷ್ಟು ಸಮಂಜಸ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಅಡಗೂರು ಗ್ರಾಮದ ಮುಖಂಡ ರಂಗಯ್ಯ ಮಾತನಾಡಿ, 1957ರಲ್ಲಿಯೇ ಜಮೀನುಗಳಿಗೆ ಸಾಗುವಳಿ ದೊರಕಿದೆ. ಸರ್ಕಾರಿ ಭೂಮಿ ಎಂಬುದನ್ನು ಖಚಿತಪಡಿಸಿಕೊಂಡು ಕಂದಾಯ ಇಲಾಖೆಯಿಂದ ಜಮೀನಿಗೆ ಸಾಗುವಳಿ ಕೊಟ್ಟಿದ್ದಾರೆ. 1800 ರಲ್ಲಿ ಅರಣ್ಯ ಇಲಾಖೆಗೆ ಜಮೀನುಗಳು ಸೇರಿವೆ ಎಂದು ಅರಣ್ಯ ಇಲಾಖೆಯವರು ವಾದಿಸುತ್ತಾರೆ. ಸುಪ್ರೀಂಕೋರ್ಟ್‌ನಲ್ಲಿ ದಾವೆ ಇದೆ ಎನ್ನುತ್ತಾರೆ. ಅದು ಸರ್ಕಾರ ಅರಣ್ಯ ಇಲಾಖೆಗೆ ಬಿಟ್ಟ ವಿಚಾರ. ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಬೇಕು. ಪೂರ್ವಿಕರ ಕಾಲದಿಂದ ಸಾಗುವಳಿ ಮಾಡುತ್ತಿರುವುದನ್ನು ನಾವು ಮುಂದುವರಿಸುತ್ತೇವೆ ಎಂದು ಹೇಳಿದರು.
ಹೋರಾಟಗಾರ ವಿಜಯ್‌ಕುಮಾರ್ ಮುತ್ತಯ್ಯ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎ.ವಿ.ವಿಜಯ್‌ಕುಮಾರ್, ರೈತರಾದ ಕುಮಾರ್ ರತ್ನಾ ಕುಮಾರ್, ಶಿವೇಗೌಡ, ಸತೀಶ್, ಕರಿಯಯ್ಯ ಇದ್ದರು.