

ಪಾಂಡವಪುರ: ತಾಲೂಕಿನ ನಾರಾಯಣಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಸ್ತಿಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸುತ್ತಿರುವುದನ್ನು ಖಂಡಿಸಿ ಆಡಳಿತ ಮಂಡಳಿಯ ಸದಸ್ಯರು ಮಂಗಳವಾರ ಧರಣಿ ನಡೆಸಿದರು.
ಗ್ರಾಮದ ಮಾರಮ್ಮನ ದೇವಸ್ಥಾನದ ಪಕ್ಕದಲ್ಲಿ ಇರುವ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಖಾಲಿ ನಿವೇಶನದ ಬಳಿ ಪ್ರತಿಭಟನೆ ನಡೆಸಿದ ಸಂಘದ ಆಡಳಿತ ಮಂಡಳಿ ಸದಸ್ಯರು, ಅತಿಕ್ರಮ ಮಾಡಿರುವ ವ್ಯಕ್ತಿ ಹಾಗೂ ಇದಕ್ಕೆ ಸಹಕಾರ ನೀಡುತ್ತಿರುವ ಅಧಿಕಾರಿಗಳ ವಿರುದ್ಧ್ದ ಘೋಷಣೆ ಕೂಗಿದರು.
ಗ್ರಾಮದ ಇಬ್ಬರು ನಿವಾಸಿಗಳು ಸಂಘದ ನಿವೇಶನವನ್ನು ಅಕ್ರಮವಾಗಿ ಅತಿಕ್ರಮಿಸಿರುವ ಜತೆಗೆ ಗ್ರಾಪಂ ವತಿಯಿಂದ ಪರವಾನಗಿ ಪಡೆಯದೆ ಏಕಾಏಕಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಗ್ರಾಪಂ ಅಧಿಕಾರಿಗಳಿಗೆ ಅತಿಕ್ರಮ ಮಾಡಿಕೊಂಡು ಮನೆ ನಿರ್ಮಿಸುತ್ತಿರುವ ಜಾಗವನ್ನು ತೆರವುಗೊಳಿಸುವಂತೆ ದೂರು ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಪಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಸಂಘದ ನಿವೇಶನ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿದೆ. ಹೀಗಾಗಿ, ಅತಿಕ್ರಮ ಮಾಡಿಕೊಂಡು ನಿರ್ಮಿಸುತ್ತಿರುವ ಮನೆಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಗ್ರಾಪಂ ಅಧ್ಯಕ್ಷ ಕೆ.ಕೆ.ಪ್ರಕಾಶ್, ಪಿಡಿಒ ಜಗದೀಶ್ ಆಗಮಿಸಿದ ವೇಳೆ ಪ್ರತಿಭಟನಾಕಾರರು, ಕಾನೂನಿನಂತೆ ದಾಖಲೆಗಳನ್ನು ಪರಿಶೀಲಿಸಿ ಕ್ರಮವಹಿಸಿ, ಅತಿಕ್ರಮ ಕಂಡುಬಂದರೆ ತಕ್ಷಣ ಮನೆ ನಿರ್ಮಾಣಕ್ಕೆ ಹಾಕಿರುವ ಪಿಲ್ಲರ್‌ಗಳನ್ನು ತೆರವುಗೊಳಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೆ ನಿರಂತರವಾಗಿ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಪಂ ಅಧ್ಯಕ್ಷ ಕೆ.ಕೆ.ಪ್ರಕಾಶ್, ದಾಖಲೆ ಪರಿಶೀಲಿಸಿ ತ್ವರಿತವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಸೊಸೈಟಿ ಅಧ್ಯಕ್ಷ ಜೆ.ಎಂ.ಪುಟ್ಟರಾಜು, ಉಪಾಧ್ಯಕ್ಷೆ ಎನ್.ಎಸ್.ವಿನೋಧ, ನಿರ್ದೇಶಕರಾದ ಎಸ್.ಜೆ.ಚನ್ನಕೃಷ್ಣೇಗೌಡ, ಎನ್.ಎಸ್.ಆನಂದ್, ನಂಜೇಗೌಡ, ಕರಿಯಯ್ಯ, ಎಲ್.ಚಂದ್ರವತಿ, ಕೆ.ವಿ.ಶ್ರೀನಿವಾಸ್, ಎನ್.ಎಸ್.ಯೋಗನರಸಿಂಹೇಗೌಡ, ಟಿ.ದೇವರಾಜು, ಕಾರ್ಯನಿರ್ವಾಹಣಾಧಿಕಾರಿ ಎಂ.ರಮೇಶ್, ಗುಮಸ್ತರಾದ ಎನ್.ಜಿ.ದಯಾನಂದ, ಎನ್.ಕೆ.ಪ್ರದೀಪ್ ಇದ್ದರು.