

ಕುಂದಗೋಳ: ವಿದ್ಯುತ್ ದರ, ಸೇವಾ ಹಾಗೂ ಮೀಟರ್ ಶುಲ್ಕ ಹೆಚ್ಚಿಸಿರುವುದನ್ನು ಖಂಡಿಸಿ ಪಟ್ಟಣದ ವ್ಯಾಪಾರಸ್ಥರ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಭೂತೇಶ್ವರ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಪರಮಾನಂದ ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರ ಈ ತರ ದರಗಳನ್ನು ಹೆಚ್ಚು ಮಾಡುತ್ತಿರುವುದರಿಂದ ಸಣ್ಣ ವ್ಯಾಪಾರಸ್ಥರಿಗೆ, ರೈತಾಪಿ ವರ್ಗಕ್ಕೆ, ಕೂಲಿ ಕಾರ್ಮಿಕರಿಗೆ, ಜನಸಾಮಾನ್ಯರಿಗೆ ಹೊರೆಯಾಗಿದೆ. ಕೂಡಲೇ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ. ಈ ವೇಳೆ ಪ್ರತಿಭಟನಾಕಾರರು ಹಾಗೂ ಹೆಸ್ಕಾಂ ಅಧಿಕಾರಿ ವಿ.ಎಸ್. ಮಠದ ಅವರ ಮಧ್ಯೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಗಲಾಟೆ ಶಾಂತಗೊಳಿಸಿದರು.
ವಾಗೀಶ ಗಂಗಾಯಿ, ದಶರಥ ಕಲಾಲ, ಪ್ರಕಾಶ ಸವಣೂರು, ನಿಂಗಪ್ಪ ಸಂಶಿ, ಏಕನಾಥ ಪಲ್ಲೆದ, ಪರಶುರಾಮ ಕಲಾಲ, ಬಸವರಾಜ ಮುದಗೊಣ್ಣವರ, ಈಶ್ವರ ನರಗುಂದ, ಸುರೇಶ ಹಡಪದ, ಹುಸೇನಸಾಬ ಕಡ್ಲಿ, ಮಂಜುನಾಥ ಹಿರೇಮಠ ಇತರರಿದ್ದರು.