

ಚಿಕ್ಕಮಗಳೂರು: ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ವಿರೋಧ ವ್ಯಕ್ತಪಡಿಸಿ ನ.9 ರಂದು ಖಾಂಡ್ಯ ಹೋಬಳಿ ಕಡಬಗೆರೆಯಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆ ತಿಳಿಸಿದೆ.
ಸರ್ಕಾರ ಒಂದು ವೇಳೆ ವೇದಿಕೆಯ ಬೇಡಿಕೆಗಳನ್ನು ಪರಿಗಣಿಸಿ ಪರಿಹಾರ ಒದಗಿಸದಿದ್ದಲ್ಲಿ ಬರಲಿರುವ ಗ್ರಾಪಂ ಚುನಾವಣೆ ಸೇರಿ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಸಂಚಾಲಕ ಎಂ.ಜೆ.ಚಂದ್ರಶೇಖರ್ ಮಾತನಾಡಿ, ಉದ್ದೇಶಿತ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಖಾಂಡ್ಯ ಹೋಬಳಿಯ ನಾಲ್ಕು ಗ್ರಾಪಂಗಳ ಜನವಸತಿ ಪ್ರದೇಶ ಒಳಗೊಳ್ಳಲಿದ್ದು, ಭದ್ರಾ ನದಿಯನ್ನು ಕೇಂದ್ರವಾಗಿರಿಸಿ ಸುಮಾರು 1 ರಿಂದ 12.50 ಕಿ.ಮೀ. ವ್ಯಾಪ್ತಿಯವರೆಗೆ ಪರಿಸರ ಸೂಕ್ಷ್ಮ ವಲಯವನ್ನು ವಿಸ್ತರಿಸುವ ಪ್ರಯತ್ನ ನಡೆಯುತ್ತಿದೆ. ಹಾಗೇನಾದರೂ ಆದಲ್ಲಿ ಲಕ್ಷಾಂತರ ಕೂಲಿ ಕಾರ್ಮಿಕರು, ವ್ಯಾಪಾರಿಗಳು, ರೈತ ಕುಟುಂಬಗಳು ಬೀದಿಗೆ ಬೀಳುತ್ತವೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸುವುದಾಗಿ ತಿಳಿಸಿದರು.
ಬೇರೆ ಬೇರೆ ಕಡೆ ಮಲೆನಾಡಿನಲ್ಲಿ 0 ಕಿ.ಮೀ.ನಿಂದ 1.5 ಕಿ.ಮೀ. ವ್ಯಾಪ್ತಿಗಷ್ಟೇ ಪರಿಸರ ಸೂಕ್ಷ್ಮ ವಲಯ ಸೀಮಿತಗೊಂಡಿರುವ ನಿದರ್ಶನಗಳಿವೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸಹ ಜನವಸತಿಗಳಿರುವ ಪ್ರದೇಶದಲ್ಲಿ ಅಷ್ಟೇ ಪ್ರಮಾಣದ ವ್ಯಾಪ್ತಿಗೆ ಸೀಮಿತಗೊಳಿಸಬೇಕು ಎಂದು ವೇದಿಕೆ ಆಗ್ರಹಿಸುತ್ತದೆ ಎಂದು ಹೇಳಿದರು.
ಮತ್ತೆ ಜನಾಭಿಪ್ರಾಯ ಸಂಗ್ರಹಿಸಲಿ
ಕೆಲವು ನಕಲಿ ಪರಿಸರವಾದಿಗಳು ಮತ್ತು ಎನ್‍ಜಿಒಗಳ ಕುತಂತ್ರದಿಂದಾಗಿ ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಗ್ರಾಪಂಗಳ ನಕಲಿ ಒಪ್ಪಿಗೆ ಪತ್ರಗಳನ್ನು ಸೃಷ್ಟಿಮಾಡಿ ಅರಣ್ಯ ಇಲಾಖೆ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದನ್ನು ಪುನರ್ಪರಿಶೀಲಿಸಬೇಕು. ಮತ್ತೊಮ್ಮೆ ಈ ಭಾಗದ ಜನರ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೋರಿದ್ದು, ಅವರಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂದರು.
ಎಲ್ಲ ಪಕ್ಷದವರು ನಾಗರಿಕ ರಕ್ಷಣಾ ವೇದಿಕೆಯಲ್ಲಿದ್ದು, ಪಕ್ಷಾತೀತವಾಗಿ ಈ ಹೋರಾಟ ನಡೆಯುತ್ತಿದ್ದು, ಕಡಬಗೆರೆಯ ಗಾಂಧಿ ಮೈದಾನದಲ್ಲಿ ಅಂದು ಬೆಳಗ್ಗೆ 11 ರಿಂದ ಪ್ರತಿಭಟನೆ ಪ್ರಾರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.
'ಸರ್ಕಾರಕ್ಕೆ ತಪ್ಪು ವರದಿ'
ಚಂದ್ರಶೇಖರ ರೈ ಮಾತನಾಡಿ, ನಮ್ಮ ಮಲೆನಾಡು ಹಲವು ರೀತಿಯ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಪ್ರದೇಶವಾಗಿದ್ದು, ಸರ್ಕಾರಗಳಿಗೆ ಕೋಟ್ಯಂತರ ರೂ. ಆದಾಯ ತಂದು ಕೊಡುತ್ತಿದೆ. ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ಒದಗಿಸುತ್ತಿವೆ. ಇಷ್ಟೆಲ್ಲಾ ವಾಸ್ತವಿಕ ಅಂಶಗಳನ್ನು ವಿಚಾರ ಮಾಡದೆ ಕಸ್ತೂರಿ ರಂಗನ್ ಮತ್ತವರ ತಂಡ ಹೆಲಿಕಾಪ್ಟರ್ ನಲ್ಲಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ತಪ್ಪು ವರದಿ ನೀಡಿದ್ದಾರೆ. ಜನಾಭಿಪ್ರಾಯ ಸಂಗ್ರಹಿಸಲು ಅವರು ಪ್ರಯತ್ನಿಸಿಲ್ಲ. ಅರಣ್ಯ ಇಲಾಖೆ ಕೆಲವೇ ಜನರನ್ನು ಒಳಗೊಂಡ ಸಭೆ ನಡೆಸಿ ಅವೈಜ್ಞಾನಿಕ ವರದಿ ಸಲ್ಲಿಸಿದೆ ಎಂದು ದೂರಿದರು.
ಪರದೇಶಿಗಳ ಹಣದಾಸೆಗೆ ಬಲಿಯಾಗಿ ನಮ್ಮ ದೇಶದ ಕೆಲವು ಮಿತ್ರದ್ರೋಹಿ ಸಂಘ-ಸಂಸ್ಥೆಗಳು ಮಲೆನಾಡನ್ನು ನಾಶ ಮಾಡಲು ಹೊರಟಿವೆ. ಇದರ ಪರಿಣಾಮ ಹುಲಿಯೋಜನೆ, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯ, ಬಫರ್ ಜೋನ್‍ನಂತಹ ಜನವಿರೋಧಿ ಯೋಜನೆಗಳು ಹುಟ್ಟಿಕೊಳ್ಳಲು ಕಾರಣವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭೂಮಿಯ ಮೇಲಿರುವ ಹಕ್ಕು-ಅಸ್ತಿತ್ವವನ್ನೇ ಕಸಿದುಕೊಳ್ಳುತ್ತಿರುವ ಮಾರಕ ಅಧಿಸೂಚನೆಗಳಿಂದ ಮಾನವನ ಮೂಲ ಬದುಕು ನಾಶವಾಗುವ ಕಾರಣಕ್ಕೆ ಅದನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ವೇದಿಕೆಯ ಸಂಚಾಲಕರಾದ ಎ.ಕೆ.ಸಂದೇಶ್, ಬಿ.ಎ.ಸುರೇಶ್, ಎಸ್.ಐ.ಜಯಶೀಲಾ, ನಟರಾಜ್ ಕಾಸ್ತಿ, ಪ್ರಸಾದ್ ಹೆಗ್ಡೆ, ಎಂ.ಕೆ.ಪ್ರೇಮೇಶ್, ಎಂ.ಎನ್.ರಾಜೇಶ್ ಸುದ್ದಿಗೋಷ್ಠಿಯಲ್ಲಿದ್ದರು.