

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿ ರೈತರಿಗೆ ಭೂ ಪರಿಹಾರದ ಹಣ ಪಾವತಿಸಲು ವಿಳಂಬ ವಿರೋಽಸಿ ಜನಜಾಗೃತಿ ಸಂಘದ ನೇತೃತ್ವದಲ್ಲಿ ರೈತರು ಇಲ್ಲಿನ ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಬಿಎಂಐಸಿ ಯೋಜನೆಗಾಗಿ ಧಾರವಾಡ ತಾಲೂಕಿನ ಕಲ್ಲಾಪೂರ, ಹೊಸವಾಳ, ವೆಂಕಟಾಪೂರ, ಕುಮ್ಮನಾಯಕನಕೊಪ್ಪ, ಮದಿಕೊಪ್ಪ, ಶಿಂಗನಹಳ್ಳಿ, ಕೋಟೂರ ಗ್ರಾಮಗಳ 2,170 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶಕ್ಕೆ ಸ್ವಾಧೀನ ಮಾಡಿಕೊಳ್ಳಲಾಗಿದೆ. ಗ್ರಾಮಗಳ ರೈತರು ಭೂ ಪರಿಹಾರದ ಹಣ ಪಡೆಯಲು ದಾಖಲಾತಿ ಸಲ್ಲಿಸಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೆ, ಕಚೇರಿಯ ಅಽಕಾರಿ ಮತ್ತು ಸಿಬ್ಬಂದಿ ಹಣ ಪಾವತಿಸಲು ಶೇ. 5ರಷ್ಟು ಕಮೀಶನ್ ಕೇಳುತ್ತಿದ್ದಾರೆ. ನೋಂದಣಿ ರಿಯಾಯಿತಿ ಪ್ರಮಾಣಪತ್ರ ನೀಡಲು 30 ಸಾವಿರ ರೂಪಾಯಿ ಕೇಳುತ್ತಿದ್ದಾರೆ. ಲಂಚ ನೀಡದ ರೈತರ ಕಡತಗಳಲ್ಲಿ ಅನವಶ್ಯಕ ನೆಪ ಹೇಳಿ ಪರಿಹಾರದ ಹಣ ಪಾವತಿಸಲು ವಿಳಂಬ ಮಾಡುತ್ತಿದ್ದಾರೆ.
ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ 7 ದಿನಗಳ ಒಳಗೆ ಭೂಸ್ವಾಧೀನ ಪರಿಹಾರ ಹಣ ಪಾವತಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಮೀನುಗಳನ್ನು ಭೂಸ್ವಾಧೀನದಿಂದ ಕೈಬಿಡಬೇಕು ಎಂದು ಎಸ್‌ಎಲ್‌ಒ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ವೀರಯ್ಯ ಚಿಕ್ಕಮಠ, ಬಸವರಾಜ ಸಾವಳಗಿ, ಮಹ್ಮದಗೌಸ್ ಜಮಾದಾರ, ರಾಕೇಶ ರಾಮನಗೌಡರ, ಭೀಮಪ್ಪ ಮಾದರ, ಮಂಜುನಾಥ ಪಾಟೀಲ, ಯಲ್ಲಪ್ಪ ಅಂಗಡಿ, ರಾಕೇಶ ರಾಮನಗೌಡರ, ಮಂಜುನಾಥ ಶೆಟ್ಟರ್, ಬಾಬುಸಾಬ ಸೈಯದನವರ, ಸಹದೇವ ಭೋಸಲೆ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.