ಹಾಸ್ಟೆಲ್​ ಪ್ರವೇಶಾತಿ ಆಯ್ಕೆ ಪ್ರಕ್ರಿಯೆ ವಿಳಂಬ ಖಂಡಿಸಿ ಪ್ರತಿಭಟನೆ

udp-3-abvp
Published on

ಉಡುಪಿ: ನಗರಕ್ಕೆ ಶಿಕ್ಷಣಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹೊರ ಜಿಲ್ಲೆಯಿಂದ ಬರುತ್ತಾರೆ ಈಗಾಗಲೇ ಹೈಸ್ಕೂಲ್​ ಮತ್ತು ಪಿಯುಸಿ ತರಗತಿಗಳು ಪ್ರಾರಂಭವಾಗಿ 40 ದಿನಗಳಾದರೂ ಇನ್ನು ಹಾಸ್ಟೆಲ್​ ಸೀಟು ಹಂಚಿಕೆ ಪ್ರಕ್ರಿಯೆ ಪ್ರಾರಂಭವಾಗದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಶಿಕ್ಷಣ ವಂಚಿತರಾಗುತ್ತಿದ್ದಾರೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ ಉಡುಪಿ ನಗರ ಕಾರ್ಯದರ್ಶಿ ಶ್ರೀವತ್ಸ ಹೇಳಿದರು.

ಬುಧವಾರ ಅಜ್ಜರಕಾಡು ಯುದ್ಧ ಸ್ಮಾರಕದ ಬಳಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ ಉಡುಪಿ ನಗರ ವತಿಯಿಂದ ವಿದ್ಯಾರ್ಥಿಗಳಿಗೆ ಹಾಸ್ಟೆಲ್​ ಪ್ರವೇಶಾತಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ವಿದ್ಯಾರ್ಥಿ ವೇತನ ನೀಡದ ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ವಿದ್ಯಾಸಿರಿ, ಕಾರ್ಮಿಕರ ನಿಧಿ ವಿದ್ಯಾರ್ಥಿ ವೇತನವೂ ಸಹ ಬಿಡುಗಡೆಯಾಗುತ್ತಿಲ್ಲ. ರೈತನಿಧಿ ವಿದ್ಯಾರ್ಥಿ ವೇತನ ಕಡಿತಗೊಳಿಸಿರುವುದು ಖಂಡನೀಯ ಎಂದರು. ತಾಲೂಕು ಸಂಚಾಲಕರಾದ ಅಜಿತ್​ ಜೋಗಿ ಮಾತನಾಡಿ, 100 ವಿದ್ಯಾರ್ಥಿಗಳು ಹಾಸ್ಟೆಲ್​ ಗಾಗಿ ನೋಂದಾಯಿಸಿದರೆ ಕೇವಲ 40 ವಿದ್ಯಾರ್ಥಿಗಳಿಗೆ ಮಾತ್ರ ವಸತಿ ವ್ಯವಸ್ಥೆ ಆಗುತ್ತಿದೆ. ಇನ್ನು ಉಳಿದ 60 ವಿದ್ಯಾರ್ಥಿಗಳು ನಮ್ಮ ರಾಜ್ಯದ ಬೀದಿಗಳಲ್ಲಿ ಮಲಗಬೇಕೆ ಎಂದು ಪ್ರಶ್ನಿಸಿದರು.
ನಂತರ ತಹಶೀಲ್ದಾರ್​ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ವಿಭಾಗ ಸಂಚಾಲಕ ಗಣೇಶ್​ ಪೂಜಾರಿ, ಜಿಲ್ಲಾ ಸಂಚಾಲಕ ಕಾರ್ತಿಕ್​ ಎಂ., ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸಂಹಿತಾ, ನಗರ ಸಹ-ಕಾರ್ಯದರ್ಶಿ ಭಾವನಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net