

ಮೈಸೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ನಟ ದರ್ಶನ್ ಹಾಗೂ ಗ್ಯಾಂಗ್‌ಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರು ಈ ಹಿಂದೆ ಸಿನಿಮಾಗಳಿಂದ ಸಾಕಷ್ಟು ಒಳ್ಳೆಯ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರು. ಜತೆಗೆ ಚಿತ್ರದ ನಾಯಕನಂತೆ ಆಗಬೇಕೆಂದು ಕನಸು ಕಾಣುತ್ತಿದ್ದರು. ಇದಕ್ಕೆ ಪ್ರೇರಣೆಯಂತೆ ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಡಾ.ಅಂಬರೀಷ್, ಅನಂತ್‌ನಾಗ್, ಶಂಕರ್ ನಾಗ್, ಶ್ರೀನಾಥ್ ಅವರಂತಹ ನಟರು ಸಮಾಜಕ್ಕೆ ಮಾದರಿಯಾಗಿದ್ದರು. ಆದರೆ ಇದಕ್ಕೆ ತದ್ವಿರುದ್ಧವಾಗಿ ನಟ ದರ್ಶನ್ ಹಾಗೂ ಗ್ಯಾಂಗ್ ಕೊಲೆಯಂತಹ ನೀಚ ಕೃತ್ಯ ಮಾಡಿರುವುದು ಖಂಡನೀಯ. ತೆರೆಯ ಮೇಲೆ ನಾಯಕನಾಗಿ, ನಿಜ ಜೀವನದಲ್ಲಿ ಕೊಲೆಗುಡುಕನಾಗಿ ಒಂದು ಜೀವವನ್ನೇ ತೆಗೆದಿರುವುದು ಘೋರ ಅಪರಾಧ. ಹೀಗಾಗಿ ಅವರಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಚಲನಚಿತ್ರ ವಾಣಿಜ್ಯ ಮಂಡಳಿ ದರ್ಶನ್ ಚಿತ್ರಗಳನ್ನು ಬಹಿಷ್ಕರಿಸಬೇಕು. ನಿರ್ಮಾಪಕರು, ನಿರ್ದೇಶಕರು ನಟಿಸಲು ಅವಕಾಶ ನೀಡಬಾರದು. ರಾಜ್ಯದ ಜನ ಈತನ ಸಿನಿಮಾ ನೋಡಬಾರದು. ಚಲನಚಿತ್ರ ವಾಣಿಜ್ಯ ಮಂಡಳಿ ರೇಣುಕಸ್ವಾಮಿ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು. ರೇಣುಕಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಲು ಮುಖ್ಯಮಂತ್ರಿಯಾಗಲಿ, ಸಚಿವರಾಗಲಿ ಹೋಗದಿರುವುದು, ಪರಿಹಾರ ಘೋಷಣೆ ಮಾಡದಿರುವುದು ಖಂಡನೀಯ. ಕೂಡಲೇ ಆ ಕುಟುಂಬದವರಿಗೆ ಪರಿಹಾರ ನೀಡಲಿಲ್ಲವೆಂದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ನೊಂದ ಕುಟುಂಬದವರಿಗೆ ಪರಿಹಾರ ನೀಡಬೇಕು. ಪ್ರಕರಣದ ತನಿಖೆಯನ್ನು ಶೀಘ್ರದಲ್ಲೇ ಮುಗಿಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರಾದ ನಾಲಾ ಬೀದಿ ರವಿ, ಗುರುಬಸಪ್ಪ, ಬೋಗಾದಿ ಸಿದ್ದೇಗೌಡ, ಗೋಪಿ, ಪ್ಯಾಲೇಸ್ ಬಾಬು, ಸಿದ್ದಪ್ಪ ಎಲ್‌ಐಸಿ, ಮಾಲಿನಿ, ಗೋವಿಂದರಾಜು, ಬೀಡಾ ಬಾಬು, ಹರೀಶ್, ಮಾದಪ್ಪ, ಅರವಿಂದ್ ಮನೋಹರ್ ಇತರರು ಇದ್ದರು.