

ಮೈಸೂರು: ಮುಂಬೈನಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಅವರ ನಿವಾಸದಲ್ಲಿ ಕಿಡಿಗೇಡಿಗಳು ದಾಂಧಲೆ ನಡೆಸಿರುವುದನ್ನು ಖಂಡಿಸಿ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್(ಎಸ್‌ಸಿ) ಸಮಿತಿ ವತಿಯಿಂದ ಸೋಮವಾರ ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇದು ರಾಷ್ಟ್ರೀಯ ನಾಯಕರಿಗೆ ಮಾಡಿದ ಅವಮಾನವಾಗಿದೆ. ಈ ಪೈಶಾಚಿಕ ಕೃತ್ಯದ ಹಿಂದೆ ಆರ್‌ಎಸ್‌ಎಸ್ ಹಾಗೂ ಮಹಾರಾಷ್ಟ್ರ ಬಿಜೆಪಿ ಪಕ್ಷದ ಕೈವಾಡವಿದೆ. ಅಂಬೇಡ್ಕರ್ ಅವರು ದೀನ ದಲಿತರ ಏಳಿಗೆಗೆ, ಶೋಷಣೆಗೆ ಒಳಗಾದ ಮಹಿಳೆಯರು, ಕಾರ್ಮಿಕರನ್ನು ಶೋಷಣೆಯಿಂದ ಮುಕ್ತಗೊಳಿಸಲು ಹೋರಾಟ ಮಾಡಿದಂತಹ ಮಹಾನ್ ವ್ಯಕ್ತಿ. ಇಂಥ ಮಹಾನ್ ವ್ಯಕ್ತಿಯ ನಿವಾಸದ ಮೇಲೆ ದಾಳಿ ನಡೆಸಿರುವುದು ಪ್ರಜಾಪ್ರಭುತ್ವವನ್ನು ಅಣಕಿಸುವಂತಹ ಕಾರ್ಯವಾಗಿದೆ ಎಂದು ಕಿಡಿಕಾರಿದರು.
ಅಂಬೇಡ್ಕರ್ ಅವರ ಹೋರಾಟ ಹಾಗೂ ತ್ಯಾಗಕ್ಕೆ ಮಸಿ ಬಳಿಯುವ ಕಾರ್ಯವಾಗಿದ್ದು, ಮಹಾನಾಯಕರ ಪ್ರತಿಮೆ ಸೇರಿ ನಿವಾಸದ ಮೇಲೆ ಈ ರೀತಿಯ ಕೃತ್ಯಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕುತಂತ್ರವಾಗಿದೆ. ದಾಳಿ ಮಾಡಿರುವ ಕಿಡಿಗೇಡಿಗಳನ್ನು ಶೀಘ್ರವೇ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಎಸ್.ರಾಜೇಶ್, ಮುಖಂಡರಾದ ಸುನಂದಕುಮಾರ್, ಉದಯಕುಮಾರ್, ಜಗದೀಶ್‌ಕುಮಾರ್ ಭಾಗವಹಿಸಿದ್ದರು.