

ಮೈಸೂರು: ಕೆಆರ್‌ಎಸ್ ಅಣೆಕಟ್ಟೆಯ ಬಳಿ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಖಂಡಿಸಿ ಕನ್ನಡ ವೇದಿಕೆಯಿಂದ ಪ್ರತಿಭಟನೆ ನಡೆಯಿತು.
ನಗರದ ಹಳೇ ಜಿಲ್ಲಾಧಿಕಾರಿ ಕಚೇರಿಯ ಬಳಿ ಶನಿವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೆಆರ್‌ಎಸ್ ಅಣೆಕಟ್ಟೆ ನಿರ್ಮಿಸಿರುವುದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೋಜು ಮಸ್ತಿ ಮಾಡೋದಕ್ಕೆ ಅಲ್ಲ ಎಂದು ಕಿಡಿಕಾರಿದರು.
ರೈತಾಪಿ ವರ್ಗದವರು ಕೃಷಿ ಚಟುವಟಿಕೆಗಳು, ಮೈಸೂರು, ಬೆಂಗಳೂರು ಸೇರಿದಂತೆ ಇತರರಿಗೆ ಕುಡಿಯುವ ನೀರಿನ ಯೋಜನೆಗಾಗಿ ರಾಣಿ ಕೆಂಪನಂಜಮ್ಮಣಿ ಅವರು ಕೃಷ್ಣರಾಜಸಾಗರ ನಿರ್ಮಿಸಿದ್ದಾರೆಯೇ ವಿನಾ, ಮೋಜು ಮಸ್ತಿ ಮಾಡುವಂತಹ ಅಮ್ಯೂಸ್ಮೆಂಟ್ ಪಾರ್ಕಿಗೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಮತ್ತು ತಮಿಳುನಾಡು ಜನರ ಜೀವ ನದಿ ಕಾವೇರಿ ಮೈಸೂರಿನ ಇತಿಹಾಸ ತಿಳಿಯದ ಸಚಿವರು ವಿಧಾನಸೌಧದ ಎಲ್ಲೋ ಒಂದು ಮೂಲೆಯಲ್ಲಿ ಕುಳಿತು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವುದು ಎಷ್ಟು ಸಮಂಜಸ. ಈಗಾಗಲೇ ಡಿ.ಕೆ.ಶಿವಕುಮಾರ ಅವರ ಮುಂದಾಲೋಚನೆ ಇಲ್ಲದ ನಿರ್ಧಾರದಿಂದ ಆರ್‌ಸಿಬಿ ಕ್ರಿಕೆಟಿನ ವಿಜಯ್ಯೋತ್ಸವ ಆಚರಣೆಯಲ್ಲಿ ಕಾಲು ತುಳಿತಕ್ಕೆ 11 ಅಮಾಯಕ ಜನ ಬಲಿಯಾಗಿದ್ದಾರೆ ಎಂದು ದೂರಿದರು.
ಮೈಸೂರು ಮತ್ತು ಮಂಡ್ಯ ಭಾಗದ ಕೆಲವು ಶಾಸಕರು, ರೈತ ಹೋರಾಟಗಾರರು, ಕನ್ನಡ ಪರ ಹೋರಾಟಗಾರರು ಅಮ್ಯೂಸ್ಮೆಂಟ್ ಪಾರ್ಕ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆದರೆ ಸರ್ಕಾರದ ಮಂತ್ರಿಮಂಡಲದವರು ನಾವೇ ಕೆಆರ್‌ಎಸ್ ಅಣೆಕಟ್ಟು ನಿರ್ಮಿಸಿದ ರೀತಿಯಲ್ಲಿ ಮನ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ನೂರು ಕೋಟಿ ರೂ. ವೆಚ್ಚ ಮಾಡಿ ಕಾವೇರಿ ಆರತಿ ಮಾಡುತ್ತಿವೆ ಎಂದು ಹೇಳುತ್ತಿದ್ದಾರೆ. ಅದೇ ಹಣವನ್ನು ರೈತರ ನಿಧಿಗೆಂದು ಉಪಯೋಗಿಸಿದರೆ ಬೆಳೆ ನಷ್ಟವಾದಾಗ ಅಥವಾ ಯಾವುದಾದರೂ ಬಡ ರೈತ ತೀರಿಕೊಂಡರೆ ಪರಿಹಾರ ನೀಡಬಹುದು. ಇವೆಲ್ಲವನ್ನೂ ಲೆಕ್ಕಿಸದೆ ನಾವು ಕಾವೇರಿ ಆರತಿ ಮಾಡೇ ಮಾಡುತ್ತೇವೆ ಎಂದು ಪಟ್ಟು ಹಿಡಿತಿರುವುದು ರೈತರ ದಂಗೆ ಉಂಟು ಮಾಡುವುದಕ್ಕೆ ಎಡೆ ಮಾಡಿಕೊಡುತ್ತಿದೆ ಎಂದರು.
ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣದಿಂದ ಕೆಆರ್‌ಎಸ್ ಸೌಂದರ್ಯ ಹಾಳಾಗುತ್ತದೆ. ಮುಂದೆ ಅಣೆಕಟ್ಟೆಗೆ ಅಪಾಯ ಸಂಭವಿಸಿದರೂ ಆಶ್ಚರ್ಯ ಇಲ್ಲ. ಇವೆಲ್ಲವೂ ಗೊತ್ತಿದ್ದರೂ ಸಹ ಜಾಣ ಪೆದ್ದರಂತೆ ವರ್ತಿಸಿರುವುದು ರಾಜಕೀಯ ನಾಯಕರು ವಾಸ್ತವಾಂಶ ಅರಿತು ಎಚ್ಚೆತ್ತುಕೊಳ್ಳಬೇಕು. ಅಮ್ಯೂಸ್ಮೆಂಟ್ ಪಾರ್ಕ್ ಅನ್ನು ಬೇರೆ ಸ್ಥಳಗಳಲ್ಲಿ ಮಾಡಲಿ ಎಂದು ಒತ್ತಾಯಿಸಿದರು.
ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರಾದ ನಾಲಾ ಬೀದಿ ರವಿ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಗುರು ಬಸಪ್ಪ, ಮಾದಪ್ಪ, ಗೋವಿಂದರಾಜು, ಕಾವೇರಮ್ಮ, ಹರೀಶ್, ಮಾಲಿನಿ, ಪ್ರೇಮಾ, ಪುಪ್ಪಾ, ಸುನೀಲ್, ಶಿವುಗೌಡ, ಚಿನ್ನಪ್ಪ, ಸ್ವಾಮಿಗೈಡ್, ಎಲ್ಐಸಿ ಸಿದ್ದಪ್ಪ, ಸ್ವಾಮಿ ಹೊನಕೆರೆ, ಮೋದಿ, ರಮೇಶ್ ಇತರರು ಇದ್ದರು.