

ಮುಧೋಳ: ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ ಮೀಸಲಾತಿ ನೀಡುವುದು, ಬಿಜೆಪಿ ಶಾಸಕರ ಅಮಾನತು ಹಾಗೂ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಸಂಜೆ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿದರು.
ರನ್ನ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ರ‌್ಯಾಲಿ ತಹಸೀಲ್ದಾರ್ ಕಚೇರಿಯವರೆಗೆ ತೆರಳಿ ಮನವಿ ಸಲ್ಲಿಸಲಾಯಿತು.
ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗಣ್ಣಗೌಡ ಕಾತರಕಿ ಮಾತನಾಡಿ, ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಿರುವುದು ಅಸಂವಿಧಾನಿಕ ನಡೆಯಾಗಿದೆ. ರಾಜ್ಯ ಸರ್ಕಾರದ ಜಾತಿ ಜಾತಿಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಕೆಲಸ ಮಾಡದೆ ಸಚಿವರು, ಶಾಸಕರ ವಿರುದ್ಧ ಹನಿಟ್ರ್ಯಾಪ್ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪಾದ ಕುಳಲಿ ಮಾತನಾಡಿ, ಸಂವಿಧಾನದಲ್ಲಿ ನಮೂದಿಸದ ಜನಾಂಗಕ್ಕೆ ಮೀಸಲಾತಿ ಕಲ್ಪಿಸುವ ಮೂಲಕ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಸರ್ಕಾರ ಅಪಮಾನ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ನಗರ ಅಧ್ಯಕ್ಷ ಕರಿಬಸಯ್ಯ ಹಿರೇಮಠ, ಸುನೀಲ ಕಂಬೋಗಿ ಮಾತನಾಡಿದರು.
ಡಾ. ರವಿ ನಂದಗಾಂವ, ಕಲ್ಮೇಶ ಗೋಸಾರ, ಕೆ.ಆರ್ ಮಾಚಪ್ಪನವರ, ಹಣಮಂತ ತುಳಸಿಗೇರಿ, ಸದಾಶಿವ ತೇಲಿ,ಅನಂತದಾದಾ ಘೋರ್ಪಡೆ, ರಾಜೇಂದ್ರ ಟಂಕಸಾಲಿ, ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾ ಅಧ್ಯಕ್ಷೆ ವನಜಾಕ್ಷಿ ಮಂಟೂರ, ಭೀಮ ಕುಮಕಾಲೆ, ಶ್ರೀಶೈಲ ಚಿನ್ನನವರ, ನಾಗಪ್ಪ ಅಂಬಿ, ಸಂತೋಷ ಘೋರ್ಪಡೆ, ಅರುಣ್ ಮುಧೋಳ, ಆನಂದ ಹವಳಕೋಡ, ಕುಮಾರ ಪಮ್ಮಾರ, ಬಸವರಾಜ ದಾಸರ, ಪ್ರಜ್ವಲ್ ಚಿಮ್ಮಡ ಹಾಗೂ ನಗರ ಯುವ ಮೋರ್ಚಾ ಅಧ್ಯಕ್ಷ ಅನುಪ್ ಚವ್ಹಾಣ ಮತ್ತಿತರರಿದ್ದರು.