

ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಜಾರಿಗೆ ತಂದಿದ್ದ ರೈತ ಪರ ಯೋಜನೆಗಳನ್ನು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದ್ದು, ರೈತರ ವಿರುದ್ಧವಾಗಿ ನಡೆದುಕೊಂಡಿದೆ. ದಲ್ಲಾಳಿಗಳ ಹಾವಳಿ ತಪ್ಪಿಸಲು ಜಾರಿಗೊಳಿಸಿದ್ದ ಎಪಿಎಂಸಿ ಕಾಯ್ದೆ ರದ್ದು ಮಾಡಿ ರೈತರ ಆದಾಯಕ್ಕೆ ಖೋತಾ ತಂದಿದೆ. ಅವೈಜ್ಞಾನಿಕ ವಿದ್ಯುತ್ ದರ ಏರಿಕೆಯಿಂದಾಗಿ ಹತ್ತಿ ಉದ್ಯಮ, ರೈಸ್ ಮಿಲ್, ಆಲೆಮನೆಗಳು, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಭಾರಿ ತೊಂದರೆಯಾಗಿದೆ. ವಿದ್ಯಾನಿಧಿ ಯೋಜನೆಯನ್ನು ರದ್ದು ಮಾಡಿ ರೈತರ ಮಕ್ಕಳಿಗೆ ಅನ್ಯಾಯ ಮಾಡಲಾಗಿದೆ ಎಂದು ಕಿಡಿಕಾರಿದರು.
ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಿಸಲು ಜಿಲ್ಲೆಗೊಂದು ಗೋಶಾಲೆ ಸ್ಥಾಪಿಸಲು ಬಿಜೆಪಿ ಸರ್ಕಾರ ತೀರ್ಮಾನಿಸಿತ್ತು. ಆದರೆ ಈ ಯೋಜನೆಯನ್ನು ಹಿಂಪಡೆಯಲು ಮುಂದಾಗಿದೆ. ಭೂಸಿರಿ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಕೃಷಿ ಮಾರಾಟ ಕಾಯ್ದೆ ರದ್ದು ಮಾಡಿರುವುದರಿಂದ ರೈತರಿಗೆ ತುಂಬ ನಷ್ಟವಾಗಿದೆ. ಅಲ್ಲದೆ, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡದೆ ನಿರ್ಲಕ್ಷಿಸಿದೆ. ಮೇಕೆದಾಟು ಪಾದಯಾತ್ರೆ ಕೇವಲ ರಾಜಕೀಯ ಗಿಮಿಕ್ ಎಂದು ದೂರಿದರು.
ಕ್ಷೀರಸಮೃದ್ಧಿ ಸಹಕಾರ ಬ್ಯಾಂಕ್, ಶ್ರಮ ಶಕ್ತಿ ಯೋಜನೆ ರದ್ದುಗೊಳಿಸುತ್ತಿದೆ. ಮುಂಗಾರು ವೈಫಲ್ಯದಿಂದಾಗಿ ರಾಜ್ಯದಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರ ವಾರಂಟಿ ಇಲ್ಲದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಗೊಂದಲಕ್ಕೀಡಾಗಿ ಮುಗ್ದ ಜನರನ್ನು ವಂಚಿಸುತ್ತಿದೆ. ಜೀವನ್‌ಜ್ಯೋತಿ ವಿಮಾ ಯೋಜನೆ, ಸಿರಿಧಾನ್ಯ ಸಂಸ್ಕರಣಾ ಯೋಜನೆ, ರೈತ ಸಂಪದ ಯೋಜನೆ, ಸಹಸ್ರ ಸರೋವರ ಹಾಗೂ ಸಹ್ಯಾದ್ರಿ ಸಿರಿ ಯೋಜನೆ, ಮೀನುಗಾರರಿಗೆ ವಸತಿ ಸೌಲಭ್ಯ ಯೋಜನೆ, ಸೀಗಡಿ ಕೃಷಿ ಕ್ಲಸ್ಟರ್ ಸ್ಥಾಪನೆ, ಕನಿಷ್ಠ ಬೆಂಬಲ ಬೆಲೆ ಯೋಜನೆಗಳನ್ನು ಕೈಬಿಟ್ಟಿದೆ. ಬಿಜೆಪಿ ಸರ್ಕಾರ ರೈತರ ಪರವಾಗಿ ಸಾಕಷ್ಟು ಯೋಜನೆಗಳನ್ನು ಕೊಟ್ಟಿದ್ದರೆ, ಕಾಂಗ್ರೆಸ್ ಸರ್ಕಾರ ಶೇ.50ರಷ್ಟು ರೈತಾಪಿ ವರ್ಗವನ್ನು ನಿರ್ಲಕ್ಷಿಸಿ ರಾಜ್ಯವನ್ನು ಅಧಃಪತನಕ್ಕೆ ತಳ್ಳಲು ನಿರ್ಧರಿಸಿದೆ. ರಾಜ್ಯ ಸರ್ಕಾರ ಇದೇ ರೀತಿ ರೈತ ವಿರೋಧಿ ಧೋರಣೆ ಮುಂದುವರಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಮುಖಂಡರಾದ ಮಿರ್ಲೆ ಶ್ರೀನಿವಾಸಗೌಡ, ರಮೇಶ್‌ಕುಮಾರ್, ದೇವರಾಜ್ ಇತರರು ಇದ್ದರು.