ಆಂಬುಲೆನ್ಸ್‌ಗೆ ಹಣ ವಸೂಲಿ ಖಂಡಿಸಿ ಪ್ರತಿಭಟನೆ

06Kush06
ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ತುರ್ತು ಸಮಯದಲ್ಲಿ ಆಂಬುಲೆನ್ಸ್‌ಗೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಸವನಹಳ್ಳಿ ಹಾಡಿ ನಿವಾಸಿಗಳು ಪ್ರತಿಭಟನೆ ನಡೆಸಿದರು.
Published on

ಕುಶಾಲನಗರ: ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ತುರ್ತು ಸಮಯದಲ್ಲಿ ಆಂಬುಲೆನ್ಸ್‌ಗೆ ಹಣ ವಸೂಲಿ ಮಾಡುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಸವನಹಳ್ಳಿ ಹಾಡಿ ನಿವಾಸಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.


ಕೆಲವು ದಿನಗಳ ಹಿಂದೆ ಬೈಲುಕುಪ್ಪೆ ಬಳಿ ನಡೆದ ಅಪಘಾತವೊಂದರಲ್ಲಿ ಫಾರೆಸ್ಟ್ ಗಾರ್ಡ್ ಪ್ರಾಣ ಕಳೆದುಕೊಂಡಿದ್ದರು. ಆ ವಾಹನದಲ್ಲಿದ್ದವರಿಗೆ ಒಂದೇ ಕುಟುಂಬದ ಐವರಿಗೆ ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು.

8 ನೇ ತರಗತಿಯ ದೀಪಾ ಎಂಬ ಬಾಲಕಿಗೆ ತಲೆಗೆ ಪೆಟ್ಟಾದ ಕಾರಣ ಮೈಸೂರಿಗೆ ಕರೆದುಕೊಂಡು ಹೋಗಬೇಕಾಯಿತು. ಆ ಸಮಯದಲ್ಲಿ ಅವರಿಂದ 3 ಸಾವಿರ ರೂ.ಗಳನ್ನು ಪಡೆದು ಮೈಸೂರಿಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಿದರು. ಸರ್ಕಾರ ಉಚಿತ ಸೇವೆ ಅಂತ ಹೇಳುತ್ತೆ, ಆದರೆ ತುರ್ತು ಸಮಯದಲ್ಲಿ ಆಂಬುಲೆನ್ಸ್ ಗೆ ಹಣ ಕಟ್ಟಿದರೆ ಮಾತ್ರ ಸೇವೆ ಎನ್ನುತ್ತಾರೆ.

ಹಾಡಿ ನಿವಾಸಿಗಳು ಕೆಲಸ ಕಾರ್ಯವಿಲ್ಲದೇ ಊಟಕ್ಕೂ ಪರದಾಡುವಂತಹ ಸಮಯದಲ್ಲಿ ಈ ರೀತಿ ಹಣ ವಸೂಲಿ ಮಾಡುತ್ತಿದ್ದಾರೆ. ಇದರ ಬಗ್ಗೆ ಕೂಡಲೇ ಸಂಬಂಧಪಟ್ಟ ಜಿಲ್ಲಾಡಳಿತ, ಐಟಿಡಿಪಿ ಇಲಾಖೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇದು ಪುನರಾವರ್ತನೆಯಾದರೆ ಜಿಲ್ಲಾಡಳಿತ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ನಿವಾಸಿಗಳು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net